ಹಿಂದೂ ಸಮಾಜೋತ್ಸವ ಸ್ವಾಭಿಮಾನದ ಸಂಕೇತ: ಮತ್ತೂರು ಯಾದವ ಕೃಷ್ಣ

KannadaprabhaNewsNetwork |  
Published : Feb 03, 2026, 01:30 AM IST
 ನರಸಿಂಹರಾಜಪುರ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಆಶ್ರಯದಲ್ಲಿ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮತ್ತೂರು ಸಾಮಾಜಿಕ ಚಿಂತಕ ಯಾದವ ಕೃಷ್ಣ ದಿಕ್ಸೂಚಿ ಭಾಷಣ ಮಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರಸ್ವಾಭಿಮಾನದ ಸಂಕೇತವಾದ ಹಿಂದೂ ಸಮಾಜೋತ್ಸವ ಯಾರ ವಿರುದ್ದವೂ ಅಲ್ಲ, ಯಾರನ್ನು ದ್ವೇಷ ಮಾಡುವುದಿಲ್ಲ ಎಂದು ಮತ್ತೂರು ಸಾಮಾಜಿಕ ಚಿಂತಕ ಯಾದವ ಕೃಷ್ಣ ತಿಳಿಸಿದರು.

- ನರಸಿಂಹರಾಜಪುರ ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ- ಅಖಂಡ ದೀಪೋತ್ಸವ- 3 ದೇವಸ್ಥಾನದಿಂದ ಶೋಭಾ ಯಾತ್ರೆ

ಕನ್ನಡಪ್ರ ಭ ವಾರ್ತೆ, ನರಸಿಂಹರಾಜಪುರ

ಸ್ವಾಭಿಮಾನದ ಸಂಕೇತವಾದ ಹಿಂದೂ ಸಮಾಜೋತ್ಸವ ಯಾರ ವಿರುದ್ದವೂ ಅಲ್ಲ, ಯಾರನ್ನು ದ್ವೇಷ ಮಾಡುವುದಿಲ್ಲ ಎಂದು ಮತ್ತೂರು ಸಾಮಾಜಿಕ ಚಿಂತಕ ಯಾದವ ಕೃಷ್ಣ ತಿಳಿಸಿದರು.

ಭಾನುವಾರ ರಾತ್ರಿ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಈಗಾಗಲೇ ದೇಶದಲ್ಲಿ 80 ಸಾವಿರ ಸ್ಥಳದಲ್ಲಿ ಹಿಂದೂ ಸಮಾಜೋತ್ಸವ ಮಾಡಿದ್ದೇವೆ.ಇಡೀ ಜಗತ್ತಿಗೆ ಬದುಕಿನ ಸಂಸ್ಕೃತಿ, ಬದುಕಿನ ಮೌಲ್ಯವನ್ನು ಕಲಿಸಿದ್ದೇವೆ. ಬಹಳ ವರ್ಷಗಳ ಕೆಳಗೆ ಹಿಂದೂ ಎನ್ನಲು ಭಾರತದಲ್ಲಿ ಹಿಂಜರಿಕೆ ಮಾಡುತ್ತಿದ್ದರು. 100 ವರ್ಷದ ಹಿಂದೆ 15 ರಿಂದ 20 ಹುಡುಗರು ಸೇರಿ ಆರ್.ಎಸ್.ಎಸ್. ಹುಟ್ಟುಹಾಕಿದರು. ಈಗ ಇಡೀ ದೇಶದಲ್ಲಿ ಎಲ್ಲರೂ ನಾವು ಹಿಂದೂ ಎಂದು ಎದೆಯುಬ್ಬಿಸಿ ಗರ್ವದಿಂದ ಹೇಳುತ್ತಾರೆ. ಆರ್‌.ಎಸ್.ಎಸ್.ಎಂದರೆ ಶಿಸ್ತು, ಆರ್.ಎಸ್.ಎಸ್.ಎಂದರೆ ದೇಶ ಭಕ್ತಿಗೆ, ಪ್ರಾಮಾಣಿಕತೆ ಹೆಸರಾಗಿದೆ. ನಮ್ಮ ದೇಶದ ಮೇಲೆ 1400 ವರ್ಷಗಳ ಕಾಲ ಆಕ್ರಮಣ ನಡೆದಿದ್ದರೂ ಹಿಂದೂ ಮೌಲ್ಯ ಉಳಿದಿದ್ದರೆ ಅದಕ್ಕೆ ಭಾರತ ದೇಶದ ಹಿಂದೂ ಮಹಿಳೆಯರೇ ಕಾರಣರಾಗಿದ್ದಾರೆ.ಈಗ ಹಿಂದೂ ಸಮಾಜ ಹೊಸತನದಿಂದ ಬಂದಿದೆ.ನಿತ್ಯ ನೂತನವಾಗಿದೆ.ದೇಶದ 145 ಕೋಟಿ ಜನರೂ ಹಿಂದೂಗಳೇ ಆಗಿದ್ದಾರೆ.ಹಿಂದೂ ಎನ್ನುವುದು ಪೂಜಾ ಪದ್ದತಿ ಅಲ್ಲ. ಹಿಂದೂ ಎಂಬುದು ಜೀವನದ ಮೌಲ್ಯವಾಗಿದೆ ಎಂದರು.

ಲೇಖಕಿ ಭಾಗ್ಯ ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುತ್ವ ಕೇವಲ ಧಾರ್ಮಿಕ ಸಂಕೇತವಲ್ಲ. ಅದು ಸಹಿಷ್ಣುತೆ, ಸರ್ವ ಧರ್ಮ ಸಮನ್ವಯವಾಗಿದೆ. ಮಾನವೀಯತೆ ಮತ್ತು ಸೇವೆಯ ಜೀವನ ದರ್ಶನವಾಗಿದೆ. ವಸುದೈವ ಕುಟುಂಬಕಂ ಎಂಬ ವಿಶ್ವ ಮಾನವ ಕುಟುಂಭದ ಚಿಂತನೆ ನಮ್ಮ ಸಂಸ್ಕೃತಿ ಮೂಲ. ಹಿಂದೂ ಸಮಾಜದಲ್ಲಿ ಕುಟುಂಬ ಎಂಬ ಮೊದಲ ಪಾಠ ಶಾಲೆಯಲ್ಲಿ ಸಂಸ್ಕಾರ, ಧರ್ಮಬುದ್ದಿ ಮತ್ತು ರಾಷ್ಠ ಭಾವನೆಯನ್ನು ಬೆಳೆಸುವಲ್ಲಿ ಮಹಿಳೆಯರ ಪಾತ್ರ ಅತಿ ದೊಡ್ಡದಾಗಿದೆ. ಮಹಿಳೆ ಜಾಗ್ರತಳಾದರೆ ಕುಟುಂಭ, ಸಮಾಜ ಹಾಗೂ ರಾಷ್ಟ ಬಲಿಷ್ಠವಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಮಾತನಾಡಿ, ಇಂದು 25 ಸಾವಿರ ದೀಪಗಳನ್ನು ಮಾತೆಯರು ಒಟ್ಟಾಗಿ ಹಚ್ಚಿದ್ದಾರೆ. ಪ್ರಥಮ ಬಾರಿಗೆ ಸಾವಿರಾರು ಮಹಿಳೆಯರು ಮಾತೃಶಕ್ತಿ ತೋರಿಸಿದ್ದಾರೆ. ಹಿಂದೂಗಳು ಒಟ್ಟಾಗಬೇಕು ಎಂಬ ಕಲ್ಪನೆ ಇಂದು ಸಾಕಾರಗೊಂಡಿದೆ ಎಂದರು.

ಸಭೆಯಲ್ಲಿ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಉಪಾಧ್ಯಕ್ಷೆ ಸುಜಾತಾ ಇದ್ದರು. ಭಾನುಮತಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಬಸ್ತಿಮಠದ ಜ್ವಾಲಾಮಾಲಿನಿ ಅಮ್ಮನ ಸನ್ನಿಧಿಯಿಂದ, ಕೋಟೆ ಮಾರಿಕಾಂಬ ಆವರಣದ ಆಂಜನೇಯಸ್ವಾಮಿ ಸನ್ನಿಧಿಯಿಂದ ಹಾಗೂ ಹಳೇ ಪೇಟೆ ಗುತ್ಯಮ್ಮ ದೇವಸ್ಥಾನದ ಸನ್ನಿಧಿ ಸೇರಿ 3 ಕಡೆಯಿಂದ ಏಕ ಕಾಲಕ್ಕೆ ಅಖಂಡ ದೀಪೋ ತ್ಸವ ಹಾಗೂ ಶೋಭಾ ಯಾತ್ರೆ ನಡೆದು ಅಂಬೇಡ್ಕರ್ ವೃತ್ತದಲ್ಲಿ ಒಟ್ಟಾಗಿ ನಂತರ ಎಲ್ಲಾ ಮೆರವಣಿಗೆ ಸಭಾ ಕಾರ್ಯಕ್ರಮ ನಡೆದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಸಂಪನ್ನಗೊಂಡಿತು.ಸಾವಿರಾರು ಮಹಿಳೆಯರು ರಸ್ತೆಯ ಎರಡು ಬದಿ ಹಚ್ಚಿದ ಆಕರ್ಷಕ ದೀಪೋತ್ಸವ ಮನಸೂರೆಗೊಂಡಿತು.ರಸ್ತೆಯ ಎರಡು ಬದಿಯಲ್ಲೂ ಮನೆಯ ಮುಂದೆ ರಂಗೋಲಿ ಹಾಕಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು