ಹಿಂದೂ ಸಮಾಜದ ಸಂಘಟನೆ, ಸ್ವಾವಲಂಭಿ, ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ, ನಗರಗಳಲ್ಲಿ ವಸತಿ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಶಿವಮೊಗ್ಗ ನಗರದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಹೇಳಿದರು.
ಶಿವಮೊಗ್ಗ: ಹಿಂದೂ ಸಮಾಜದ ಸಂಘಟನೆ, ಸ್ವಾವಲಂಭಿ, ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ, ನಗರಗಳಲ್ಲಿ ವಸತಿ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಶಿವಮೊಗ್ಗ ನಗರದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ನಗರದ ಹಿಂದೂ ಸಂಗಮ ಆಯೋಜನಾ ಸಮಿತಿಯು, ನಗರದ 35 ವಾರ್ಡ್‌ಗಳನ್ನು ಪ್ರತಿನಿಧಿಸುವಂತೆ ಆಯ್ದ 28 ಸ್ಥಳಗಳಲ್ಲಿ ಹಿಂದೂ ಸಂಗಮಗಳನ್ನು ಜ.18 ರಿಂದ ಫೆಬ್ರವರಿ 8 ರವರೆಗೆ ವಿವಿಧ ದಿನಗಳಂದು ಆಯೋಜಿಸುತ್ತಿದೆ ಎಂದರು.ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ, ಶಕ್ತಿಯ ಕೇಂದ್ರವಾಗಬೇಕು. ವ್ಯಕ್ತಿಯು ತನ್ನ, ಕುಟುಂಬದ ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ಜವಾಬ್ದಾರಿಯ ಪಾತ್ರವನ್ನು ನಿರ್ವಹಿಸಬೇಕು. ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಜೀವನ ಪದ್ಧತಿಯ ವಿಕಾಸ, ಸಮಾಜದ ಎಲ್ಲರೊಂದಿಗೆ ಸಾಮರಸ್ಯದ ಭಾವ, ನಾಗರಿಕ ಕರ್ತವ್ಯಗಳನ್ನು ನಿತ್ಯ ಪಾಲಿಸುವುದು, ಈ ಪಂಚ ಪರಿವರ್ತನೆಯ ಅಂಶಗಳು ಸಮಾಜದಲ್ಲಿ ಅರಳಬೇಕು. ಪ್ರತಿ ವ್ಯಕ್ತಿಯೂ ತನ್ನ ಮನೆ, ವೃತ್ತಿಯ ಕ್ಷೇತ್ರ, ಸಮಾಜದಲ್ಲಿ ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುವ ಮಹತ್ತರ ಉದ್ದೇಶವನ್ನೂ ಹಿಂದೂ ಸಂಗಮವು ಹೊಂದಿದೆ ಎಂದು ತಿಳಿಸಿದರು.ಗ್ರಾಮ ಮತ್ತು ವಸತಿಯಮಟ್ಟದಲ್ಲಿ ಹಿಂದೂಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು ಎಂಬ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಸಮಾಜೋತ್ಸವದಲ್ಲಿ ಸಮಾಜದ ಪ್ರತಿಷ್ಠಿತ ಗಣ್ಯರೂ, ಯುವ ಸಾಧಕರು, ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಎಲ್ಲಾ ಹಿಂದೂ ಬಾಂಧವರು ಈ ಸಮಾಜೋತ್ಸವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕು. ತನ್ಮೂಲಕ ಸಮಾಜದ ಜಾಗೃತಿಯ ಈ ಕಾರ್ಯಕ್ರಮದಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ಕೋರಿದರು. ಆರ್‌ಎಸ್‌ಎಸ್ ವಿಭಾಗ ಸಹಕಾರ್ಯವಾಹ ಮಧುಕರ್.ಜಿ ಮಾತನಾಡಿ, ಬಜರಂಗದಳ, ವಿಶ್ವಹಿಂದೂ ಪರಿಷತ್, ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಬಿಜೆಪಿ ಸೇರಿದಂತೆ ಹಿಂದೂಪರ ಎಲ್ಲಾ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಲಿದ್ದು, ಪಂಚ ಪರಿವರ್ತನೆಯ ಅಂಶಗಳ ಬಗ್ಗೆ ಅರಿವು ಮೂಡಿಸಲಾಗುವುದು. ಜ.25 ರಂದು ಸಿದ್ಧಯ್ಯ ಸರ್ಕಲ್‌ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭಾಗವಹಿಸಲಿದ್ದಾರೆ. ರಂಗೋಲಿ ಸ್ಪರ್ಧೆ, ಮಹಾ ಪುರಷರ ವೇಷ-ಭೂಷಣ ಸ್ಪರ್ಧೆ, ದೇಶೀ ಆಟಗಳ ಸ್ಪರ್ಧೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳು, ಸಭೆ-ಸಮಾರಂಭಗಳು ನಮ್ಮ ದೇಶದ ಆಚಾರ-ವಿಚಾರಗಳು, ಪರಿಸರ-ಪ್ರಕೃತಿ ಬಗ್ಗೆ ವಿಚಾರ ಸಂಕಿರಣಗಳು, ಕೂಡ ಇದರೊಂದಿಗೆ ಜೋಡಿಸಿಕೊಂಡಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರತಿಭಾ ಅರುಣ್, ಪದಾಧಿಕಾರಿಗಳಾದ ಶ್ರೀನಿವಾಸ್, ಆನಂದ್‌ರಾವ್ ಜಾದವ್, ರೂಪ, ಅರುಣ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.