ಅಂಬೇಡ್ಕರ್‌ ಅವರ ಜೀವನವೇ ಒಂದು ಸಂದೇಶವಾಗಿದೆ. ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಂಡಿದ್ದು ನಮಗೆಲ್ಲ ಸ್ವಾಭಿಮಾನದ ಸಂಕೇತ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಡಾ.ಬಿ.ಆರ್.ಅಂಬೇಡ್ಕರ್‌ ಮಾರ್ಗದರ್ಶನ ಹಾಗೂ ಅವರ ದಾರಿಯಲ್ಲಿ ಸಾಗಿದರೆ ಅವಕಾಶ ಹಾಗೂ ಸೌಲಭ್ಯ ಸಿಕ್ಕು ಬದಲಾವಣೆಯಾಗಲು ಸಾಧ್ಯ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಅಂಬೇಡ್ಕರ್‌ ಬರೆದ ಸಂವಿಧಾನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ ಎಂದರು.

ದೇಶಕ್ಕೆ ಮಾದರಿ ಸಂವಿಧಾನ ಕೊಡುವ ಮೂಲಕ ಅಂಬೇಡ್ಕರ್‌ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ, ಸಂವಿಧಾನ ಬಂದ ಬಳಿಕ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪ್ರತಿಮೆ ಸ್ಥಾಪನೆಗಿಂತಲೂ ಅಂಬೇಡ್ಕರ್ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ, ಆ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.

ಸಂಸದರಾಗಿದ್ದ ವಿ.ಶ್ರೀನಿವಾಸ್‌ ಪ್ರಸಾದ್‌, ಬಿ.ರಾಚಯ್ಯ, ಆರ್.‌ಧ್ರುವನಾರಾಯಣ, ಎ.ಸಿದ್ದರಾಜು, ಎಂ.ಶಿವಣ್ಣ ಹಾಗೂ ಸಂಸದ ಸುನೀಲ್‌ ಬೋಸ್‌ ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಎಸ್‌ಇಪಿ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಕೇಳಿದ್ದೇನೆ. ಅನುದಾನ ಬಂದ ಬಳಿಕ ಗ್ರಾಮದ ಸಿಸಿ ರಸ್ತೆ, ಚರಂಡಿ ಹಾಗೂ ಅಂಬೇಡ್ಕರ್‌ ಭವನಕ್ಕೆ ಅಡುಗೆ ಮನೆ ಹಾಗೂ ಡೈನಿಂಗ್‌ ಹಾಲ್‌ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಅಂಬೇಡ್ಕರ್‌ ತಮ್ಮ ಜೀವನದ ಸಂಕಷ್ಟದ ಸಮಯದಲ್ಲೂ ಶ್ರೇಷ್ಠ ಸಂವಿಧಾನ ಬರೆದು ದೇಶದ ಪ್ರಗತಿಗೆ ಬುನಾದಿ ಹಾಕಿದರು ಎಂದರು.

ಅಂಬೇಡ್ಕರ್‌ ಬದುಕಿದ್ದಾಗ ಭಾರತ ರತ್ನ ಸಿಗಲಿಲ್ಲ. ಅಂಬೇಡ್ಕರ್‌ ಸದಾ ಕಾಲದಲ್ಲೂ ನಮಗೆಲ್ಲ ರತ್ನವಾಗಿದ್ದಾರೆ. ಅಂಬೇಡ್ಕರ್‌ ಜಗತ್ತು ಇರುವವರೆಗೂ ಅಜರಾಮರ ಎಂದರು.

ಕೋಟೆಕೆರೆ ಫ್ಯಾಕ್ಸ್ ಉಪಾಧ್ಯಕ್ಷ ರಾಮಕೃಷ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೧೭ರಲ್ಲಿ ಪ್ರತಿಮೆಗೆ ಗುದ್ದಲಿ ಪೂಜೆ ಮಾಡಲಾಗಿತ್ತು. ನಂತರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಚಂದಾ ಎತ್ತಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2 ಲಕ್ಷ ರು.,ಸಮಾಜ ಸೇವಕ ಗೋಪಾಲ್ ಹೊರೆಯಾಲ 4 ಲಕ್ಷ ರು. ನೆರವು ನೀಡಿದರು. ಬಿಜೆಪಿ ಮುಖಂಡ ಡಾ.ನವೀನ್ ಮೌರ್ಯ ಕೂಡ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಹರ್ಷವರ್ಧನ್‌ ಹಾಗೂ ಬಿಜೆಪಿ ಯುವ ಮುಖಂಡರೂ ಆದ ಯುವ ವಿಜ್ಞಾನಿ ಡಾ.ನವೀನ್ ಮೌರ್ಯ ಮಾತನಾಡಿದರು.

ಅಕ್ಕ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಪ್ರಮುಖ ಭಾಷಣದಲ್ಲಿ ಅಂಬೇಡ್ಕರ್‌ ಅವರ ಸಾಧನೆ ಹಾಗೂ ಜೀವನ ಕುರಿತು ಸುಧೀರ್ಘವಾಗಿ ಮಾತನಾಡಿದರು.

ಟಿ‌.ನರಸೀಪುರ ನಳಂದ ವಿಹಾರದ ಬೋಧಿರತ್ನ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬೇಡ್ಕರ್‌ ಅವರ ಜೀವನವೇ ಒಂದು ಸಂದೇಶವಾಗಿದೆ. ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಂಡಿದ್ದು ನಮಗೆಲ್ಲ ಸ್ವಾಭಿಮಾನದ ಸಂಕೇತ ಎಂದರು.

ಸಮಾರಂಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಗ್ರಾಪಂ ಅಧ್ಯಕ್ಷೆ ಮಂಜುಳ, ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ‌ ಸಂಘದ ಅಧ್ಯಕ್ಷ‌ ಕೆ.ಎಂ.ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಕೋಟೆಕೆರೆ ಫ್ಯಾಕ್ಸ್ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ, ದಲಿತ ಮುಖಂಡ ಸುಭಾಷ್ ಮಾಡ್ರಹಳ್ಳಿ, ಯಜಮಾನ ರಂಗಸ್ವಾಮಿ, ಸೆಸ್ಕಾಂ ಅಧಿಕಾರಿ ರಾಮಚಂದ್ರು ಹಾಗೂ ನಾಡದೇಶದ ಶೆಟ್ಟಿ, ಹರೀಶ್ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ವಾಟಾಳ್ ಶಿವಾನಂದ, ಜೈ ಭೀಮ್ ಯುವಕರ ಸಂಘ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ನೂರಾರು ಮಂದಿ ಇದ್ದರು.