ಕುಷ್ಟಗಿ: ದೇಶ ಭಕ್ತಿ, ಹಿಂದೂ ಜಾಗೃತಿ ಮೂಡದಿದ್ದಲ್ಲಿ ಮತ್ತೊಮ್ಮೆ ಭಾರತೀಯರು ಗುಲಾಮರಾಗಿ ಬಾಳಬೇಕಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತಿಯ ಪ್ರಚಾರಕ ನರೇಂದ್ರ ಜಿ ಹೇಳಿದರು.
ಹಿಂದೂ ಧರ್ಮದಲ್ಲಿ ಅನೇಕ ಜಾತಿಯತೆ, ಅಸ್ಪೃಶ್ಯತೆ, ಮೇಲು ಕೀಳು ಪದ್ಧತಿಯ ಲಾಭ ಪರಕೀಯರಾದ ಮೋಘಲರು, ಪೋರ್ಚುಗೀಸರು,ಬ್ರೀಟಿಷರು ಸೇರಿದಂತೆ ಅನೇಕರು ಪಡೆದುಕೊಂಡು ನಮ್ಮನ್ನು ಗುಲಾಮರಂತೆ ಕಂಡಿದ್ದಾರೆ. ಆದ ಕಾರಣ ನಾವು ಸಾಮರಸ್ಯದಿಂದ ಬದುಕು ನಡೆಸಿದಾಗ ಮಾತ್ರ ಹಿಂದೂ ಸಮಾಜ ಸುಂದರವಾಗುತ್ತದೆ ಎಂದರು.
ಭಾರತ ಮಾತೆಯ ಮೇಲೆ ಕೆಟ್ಟ ಕಣ್ಣು ಹಾಕಿದವರು ಹಾಗೂ ಹಿಂದೂ ಶ್ರದ್ಧಾ ಕೇಂದ್ರ ನಾಶ ಮಾಡಿದವರು ಜಗತ್ತಿನಲ್ಲಿ ಯಾರು ಉಳಿದಿಲ್ಲ, ದೇಶದಲ್ಲಿ ಅನೇಕ ಸಂಸ್ಕೃತಿಯ ಜನರು ಬದುಕಿ ಬಾಳಿದ್ದಾರೆ. ಅನ್ಯ ಸಂಸ್ಕೃತಿ ಅವನತಿಯಾದರು ನಮ್ಮ ಹಿಂದೂ ಸಂಸ್ಕೃತಿ ಇನ್ನೂ ಉಳಿದಿದೆ ಎಂದರು.ಇತ್ತೀಚಿಗೆ ನಡೆದ ಮಹಾಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾಧು ಸಂತರು ಪಾಲ್ಗೊಂಡಿದ್ದರು. ಸಹಸ್ರಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಾಧು ಸಂತರು ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಬಿತ್ತನೆ ಮಾಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಆರ್ ಎಸ್ ಎಸ್ ಸಂಘಟನೆ ನೂರು ವರ್ಷಗಳಿಂದ ಹಿಂದೂಗಳ ಒಗ್ಗಟ್ಟಿಗಾಗಿ ದುಡಿಯುತ್ತಿದ್ದು, ಹಿಂದೂ ಸಮಾಜ ನೇತೃತ್ವದಲ್ಲಿ ಹಿಂದೂಗಳ ಸಂಘಟನೆ ಆಗಬೇಕಿದೆ. ನಮ್ಮ ದೈನಂದಿನ ನಡವಳಿಕೆಗಳಲ್ಲಿ ಹಿಂದೂ ಸಂಸ್ಕೃತಿ ಅಳವಡಿಸಿಕೊಂಡು ಉಳಿದವರಿಗೆ ಜಾಗೃತಿ ಮೂಡಿಸಬೇಕೀದೆ. ಹಿಂದೂ ಧರ್ಮದಲ್ಲಿ ಜನಿಸಿದ ಮಹಾನ್ ಪುರುಷರ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮದ್ದಾನೇಶ್ವರ ಮಠದ ಕರಿಬಸವಶ್ರೀಗಳು ಮಾತನಾಡಿ, ನಮ್ಮ ಮನೆಯಲ್ಲಿನ ಮಕ್ಕಳಲ್ಲಿ ಹಿಂದೂ ಸಂಪ್ರದಾಯ ಕಲಿಸಬೇಕು. ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದ ಅವರು, ಉತ್ತಮ ಶಿಕ್ಷಣ ಮೂಲಕ ಸಂಸ್ಕೃತಿ ಹುಟ್ಟು ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಡಾ.ಬಸವರಾಜ ಕ್ಯಾವಟರ್, ವಿನಯಕುಮಾರ ಮೇಲಿನಮನಿ, ಕಲ್ಲೇಶ ತಾಳದ, ಜಯತಿರ್ಥ ದೇಸಾಯಿ, ನರಸಿಂಹ ಕಾರಟಗಿ, ವಿರೇಶ ಬಂಗಾರಶೆಟ್ಟರ, ಪರಶುರಾಮ ನಾಗರಾಳ, ಬಸವರಾಜ ಎನ್.ಪಾಟೀಲ, ಕೆ.ಮಹೇಶ, ಮಹಾಂತೇಶ ಬಾದಾಮಿ, ಶಿವುಕುಮಾರ ಗಂಧದಮಠ, ಪ್ರಭಾಕರ ಚಿಣಿ, ಪ್ರಭುಶಂಕರಗೌಡ ಪಾಟೀಲ್,ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೆದ, ಅಶೋಕ ಬಳೂಟಗಿ, ಅಮರೇಶ ಶೆಟ್ಟರ ಸೇರಿದಂತೆ ಹಿಂದೂ ಸಮಾಜದವರು, ಯುವಕ ಸಂಘಟನೆ, ನಗರದ ನಾಗರಿಕರು ಮಹಿಳೆಯರು ಇದ್ದರು.