ಹೂವಿನಹಡಗಲಿ: ಶಕ್ತಿ ಆರಾಧಕರಾಗಿರುವ ಭಾರತೀಯರ ಮೇಲೆ ಎಷ್ಟೇ ಅಕ್ರಮಣ ಮಾಡಿದ್ದರೂ ಈ ದೇಶದ ಹಿಂದೂ ಸಂಸ್ಕೃತಿ, ನಾಗರಿಕತೆ ಇನ್ನು ಜೀವಂತವಾಗಿದೆ. ಹಿಂದೂ ಸಮಾಜಕ್ಕೆ ಸಾವಿಲ್ಲ, ಏನೇ ಕಷ್ಟ ಬಂದರೂ ಕುಗ್ಗದೇ ದೇಶ ಸೇವೆಯಲ್ಲಿ ತೊಡಗಿದ್ದೇವೆಂದು ಆರ್‌ಎಸ್‌ಎಸ್ ಬಳ್ಳಾರಿ ವಕ್ತಾರ ಪಾಂಡುರಂಗ ಆಪ್ಟೆ ಹೇಳಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ವಿಶ್ವ ಹತ್ತಾರು ದೇಶದಗಳ ಮೇಲೆ ಮುಸ್ಲಿಂ ಮತ್ತು ಕ್ರೈಸ್ತರ ದಾಳಿಯಿಂದಾಗಿ ಆ ದೇಶಗಳ ಧರ್ಮ ಮತ್ತು ಸಂಸ್ಕೃತಿ ಹೇಳಲು ಹೆಸರಿಲ್ಲದಂತೆ ಮಾಯವಾಗಿವೆ. ಆದರೆ ಭಾರತದ ಮೇಲೆ ಸಾಕಷ್ಟು ದಾಳಿ ನಡೆದಿವೆ. ಆದರೆ ಹಿಂದೂ ಸಮಾಜ ನಾಶವಾಗಿಲ್ಲ. ನಮ್ಮ ಸಂಸ್ಕೃತಿ ವಿನಾಶವಾಗಿಲ್ಲ. ಇದರ ಉಳಿಗಾಗಿಯೇ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ಗೆ 100 ವರ್ಷಗಳು ತುಂಬಿರುವ ಕಾರಣಕ್ಕಾಗಿ ದೇಶದ ಎಲ್ಲ ಕಡೆಗೂ ಪಥಸಂಚಲನ ನಡೆಯುತ್ತಿವೆ ಎಂದರು.
ಹಿಂದೂ ಧರ್ಮದ ಬೇರುಗಳು ಬಾಹಳಷ್ಟು ಆಳವಾಗಿವೆ. ಜಗತ್ತಿನ ಶ್ರೇಷ್ಠ ಧರ್ಮವಾಗಿದೆ. ವಿಶಾಲ ಮನೋಭಾವನೆ ಹೊಂದಿದೆ. ಆ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಅಳಿಸಿ ಹಾಕಲು ಯಾರಿಂದಲ್ಲೂ ಸಾಧ್ಯವಾಗಿಲ್ಲ ಎಂದರು.ಜಗತ್ತಿನ ರಾಷ್ಟ್ರಗಳು ಹಿಂದೂ ಧರ್ಮವನ್ನು ಒಪ್ಪುತ್ತಿವೆ. ವಿಶ್ವವನ್ನು ಸರಿ ದಾರಿಗೆ ತರಲು ಭಾರತ ಮತ್ತಷ್ಟು ಗಟ್ಟಿಯಾಗಬೇಕಿದೆ. ಮುಸ್ಲಿಂ, ಕ್ರೈಸ್ತರನ್ನು ವಿರೋಧಿಸಲು ಸಂಘ ಜನ್ಮ ತಾಳಿಲ್ಲ. ಹಿಂದೂ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ದೇಶಕ್ಕೆ ಆಪತ್ತು ಎದುರಾದ ಸಂದರ್ಭದಲ್ಲಿ ಸ್ವಯಂ ಸೇವಕ ಕೆಲಸ ಮಾಡಿದ್ದೇವೆ. ಈ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಸಂಘದ ಕೆಲಸಕ್ಕೆ ಶರಣಾಗಿದ್ದಾರೆ. ನಮ್ಮಲ್ಲಿ ನಕರಾತ್ಮಕ ಚಿಂತನೆಗಳಿಲ್ಲ, ಸಾಮರಸ್ಯ, ಸ್ವದೇಶಿ, ನಾಗರಿಕ ಶಿಷ್ಟಾಚಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಭರತ್ ಕುಮಾರ ವಹಿಸಿದ್ದರು.ಇದಕ್ಕೂ ಮುನ್ನ ಪಥಸಂಚಲನ ತಾಲೂಕ ಕ್ರೀಡಾಂಗಣದಿಂದ ಹೊರಟು, ಅಬ್ದುಲ್ ಕಲಂ ವೃತ್ತ, ಮದಲಗಟ್ಟ ವೃತ್ತ, ಉದ್ಭವ ವೃತ್ತ, ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಕ್ರೀಡಾಂಗಣಕ್ಕೆ ಬಂದು ಸೇರಿತು. ಪಥ ಸಂಚಲನದಲ್ಲಿ ಶಾಸಕ ಕೃಷ್ಣನಾಯ್ಕ ಸೇರಿದಂತೆ 500ಕ್ಕೂ ಹೆಚ್ಚು ಗಣವೇಶಧಾರಿಗಳಿದ್ದರು.