ಕತ್ತಲೆಯಲ್ಲಿ ಕುಂಬಾರರ ಬದುಕು, ಮಣ್ಣಿನ ಹಣತೆಗೆ ಬೇಡಿಕೆ ಕುಸಿತ

KannadaprabhaNewsNetwork |  
Published : Oct 20, 2025, 01:04 AM IST
ಪೋಟೊ19ಕೆಎಸಟಿ2: ಕುಷ್ಟಗಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಮಣ್ಣಿನ ಹಣತೆಗಳನ್ನು ಮಾರಾಟ ಮಾಡುತ್ತಿರುವ ತಳುವಗೇರಾ ಗ್ರಾಮದ ಯಮುನಮ್ಮ ಕುಂಬಾರ. 19ಕೆಎಸಟಿ2ಎ: ಕುಷ್ಟಗಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಪಿಂಗಾಣಿ ಹಣತೆಗಳನ್ನು ಮಾರಾಟಕ್ಕಿಟ್ಟಿರುವದು. | Kannada Prabha

ಸಾರಾಂಶ

ಅನ್ಯ ರಾಜ್ಯಗಳಿಂದ ಹಣತೆಗಳು ಲಗ್ಗೆ ಇಡುತ್ತಿರುವ ಪರಿಣಾಮ ಮಣ್ಣಿನ ಹಣತೆಗಳಿಗೆ ಬೇಡಿಕೆ ಇಲ್ಲದಂತಾಗಿದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ದೀಪದ ಬುಡದಲ್ಲೇ ಕತ್ತಲು ಎಂಬಂತೆ ಬೆಳಕಿನ ದೀಪಾವಳಿ ಹಬ್ಬಕ್ಕೆ ಬೇಕಾಗುವ ಮಣ್ಣಿನ ಹಣತೆಯ ದೀಪಗಳನ್ನು ಸಿದ್ದಪಡಿಸುವ ಕುಂಬಾರರ ಬದುಕಿನಲ್ಲಿ ಕತ್ತಲೂ ಆವರಿಸಿದೆ.

ದೀಪಾವಳಿ ಹಬ್ಬ ಬಂತೆಂದರೆ ಸಾಕು, ದಶಕಗಳ ಹಿಂದೆ ಕುಂಬಾರರ ಮನೆಯಲ್ಲಿ ಹಬ್ಬದ ಸಡಗರ ಇರುತ್ತಿತ್ತು, ಈಗ ಆ ಮನೆಗಳಲ್ಲಿ ಕತ್ತಲು ಆವರಿಸಿದೆ.

ದೀಪಾವಳಿ ಬರುವುದಕ್ಕಿಂತ ತಿಂಗಳು ಮುಂಚಿತವಾಗಿ ಕುಂಬಾರರು ಪರಿಸರಸ್ನೇಹಿ ಮಣ್ಣಿನ ಹಣತೆ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು, ಆದರೆ ಈಗ ಅನ್ಯ ರಾಜ್ಯಗಳಿಂದ ಹಣತೆಗಳು ಲಗ್ಗೆ ಇಡುತ್ತಿರುವ ಪರಿಣಾಮ ಮಣ್ಣಿನ ಹಣತೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ, ಹನುಮಸಾಗರ, ಹನುಮನಾಳ, ತಳುವಗೇರಾ, ದೋಟಿಹಾಳ ವಿವಿಧ ಗ್ರಾಮಗಳಲ್ಲಿ ಕುಂಬಾರ ಸಮುದಾಯದವರು ದೀಪಾವಳಿ ಹಬ್ಬಕ್ಕೆ ಅಂಗವಾಗಿ ಸಾವಿರಾರು ಮಣ್ಣಿನ ಹಣತೆ ಸಿದ್ಧಗೊಳಿಸುತ್ತಿದ್ದವರು ಈಗ ಕೇವಲ ನೂರಾರು ಹಣತೆಗೆ ಬಂದು ನಿಂತಿದ್ದಾರೆ.

ಆಧುನಿಕತೆ ಸವಾಲು: ಆಧುನಿಕತೆಯ ಭರಾಟೆಯಲ್ಲಿ ಪಿಂಗಾಣಿ ಹಣತೆಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿದ್ದು, ಕುಂಬಾರರನ್ನು ಮೂಲೆಗೆ ದೂಡಿವೆ. ಆಧುನಿಕತೆಯ ಸವಾಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗದೆ ಹೊಸ ತಲೆಮಾರಿನ ಯುವಕರು ಕುಂಬಾರಿಕೆ ತೊರೆದು ಅನ್ಯ ಕೆಲಸ ಆಶ್ರಯಿಸಿದ್ದಾರೆ. ಮಣ್ಣಿನ ಹಣತೆಗಳಿಗೆ ಬೇಡಿಕೆ ಕುಸಿದಿರುವುದು ಕುಂಬಾರರ ಪಾಲಿಗೆ ಮುಳುವಾಗಿದೆ ಎನ್ನಬಹುದು.

ಅನ್ಯರಾಜ್ಯದ ಪಿಂಗಾಣಿ ಹಣತೆಗಳು: ಕುಷ್ಟಗಿ ತಾಲೂಕಿನಲ್ಲಿ ಪ್ರತಿ ವರ್ಷವೂ ತಮಿಳುನಾಡು, ಮಹಾರಾಷ್ಟ್ರ ಮೂಲದ ಪಿಂಗಾಣಿ ಹಣತೆಗಳು ಮಾರಾಟವಾಗುತ್ತವೆ. ಈ ಮಾರಾಟಗಾರರು ಕುಂಬಾರರಲ್ಲ, ಸಾಂಪ್ರದಾಯಿಕ ಕುಂಬಾರಿಕೆ ಮಾಡುವ ಜನರಿಗೆ ಮಾರುಕಟ್ಟೆಯಲ್ಲಿ ಈಗ ಸವಾಲು ಎದುರಾಗಿದೆ.

ಕೆಲ ಜನರು ಮಣ್ಣಿನ ಹಣತೆ ಬಯಸುವ ಹಿನ್ನೆಲೆ ಕುಂಬಾರರು ಬೇಕಾದಷ್ಟು ಹಣತೆಗಳನ್ನು ತಯಾರಿಸುತ್ತಿದ್ದು, ಉಳಿದಂತೆ ಗ್ರಾಹಕರ ಬೇಡಿಕೆ ಪೂರೈಸಲು ಸ್ಥಳೀಯ ಕುಂಬಾರರು ಅನಿವಾರ್ಯವಾಗಿ ಪಿಂಗಾಣಿ ಹಣತೆ ಮಾರಾಟದ ಮೂಲಕ ಜೀವ ನಡೆಸುತ್ತಿದ್ದಾರೆ.

ಇನ್ನರ್‌ವೀಲ್‌ ಕ್ಲಬ್ ಸಾಥ್: ಕುಷ್ಟಗಿ ಪಟ್ಟಣದ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಕುಂಬಾರರು ತಯಾರಿಸಿದ ಮಣ್ಣಿನ ಹಣತೆಗಳನ್ನು ಕಳೆದ ಐದಾರು ವರ್ಷಗಳಿಂದ ಖರೀದಿ ಮಾಡಿ, ದೇವಸ್ಥಾನ ಹಾಗೂ ಸ್ಥಳೀಯ ನಿವಾಸಿಗಳಿಗೆ ಉಚಿತವಾಗಿ ಕೊಡುವ ಮೂಲಕ ಆದಾಯ ನೀಡಿ ವ್ಯಾಪಾರಕ್ಕೆ ಸಾಥ್ ನೀಡುತ್ತಿದೆ.

ಸುಮಾರು 40 ವರ್ಷಗಳಿಂದ ನಾವು ಕುಂಬಾರಿಕೆ ಮಾಡುತ್ತಿದ್ದು, ಕುಟುಂಬದ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಈ ಹಿಂದೆ ಕುಂಬಾರರ ಸಾಮಗ್ರಿಗಳಿಗೆ ಬೆಲೆಯಿತ್ತು, ಈಗ ಕಷ್ಟಪಟ್ಟು ಮಾಡುವ ಕೆಲಸಕ್ಕೆ ಬೆಲೆಯಿಲ್ಲದಂತಾಗಿದೆ. ಈಗಿನ ಜನರು ಶೋಕಿಗೆ, ಡಿಸೈಸ್‌ಗೆ ಬೆಲೆ ಕೊಡುತ್ತಿದ್ದಾರೆ. ನಮ್ಮಂತಹ ಕುಂಬಾರರು ಬದುಕು ನಡೆಸುವುದು ಬಹಳ ಕಷ್ಟದಾಯಕವಾಗಿದೆ ಎಂಧು ತಳುವಗೇರಾ ಹಣತೆ ವ್ಯಾಪಾರಿ ಯಮುನಮ್ಮ ಕುಂಬಾರ ತಿಳಿಸಿದ್ದಾರೆ.

ನಾವು ಕಳೆದ ಆರು ವರ್ಷಗಳಿಂದ ದೀಪಾವಳಿ ಸಮಯದಲ್ಲಿ ಕುಂಬಾರರ ಮನೆಯಲ್ಲಿರುವ ಮಣ್ಣಿನ ಹಣತೆ ಖರೀದಿಸುವ ಮೂಲಕ ದೇವಸ್ಥಾನ, ಸಾರ್ವಜನಿಕರಿಗೆ ಉಚಿವಾಗಿ ನೀಡಿ ಪರಿಸರಸ್ನೇಹಿ ಹಣತೆ ಬಳಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಇನ್ನರ್‌ವೀಲ್‌ ಕ್ಲಬ್ ಉಪಾಧ್ಯಕ್ಷ ಶಾರದಾ ಶೆಟ್ಟರ್‌ ತಿಳಿಸಿದ್ದಾರೆ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ