ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಪೆರಂಬಾಡಿ ವಾಲ್ಮೀಕಿ ಭವನದಲ್ಲಿ ಆರ್ಜಿ ಬೇಟೋಳಿ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಸಭಾ ಕಾರ್‍ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಬಿ.ವಿ. ಭವಾನಿ ಶಂಕರ್ ಬೋರ್ಕರ್ ಮಾತನಾಡಿ, ಪ್ರತಿಯೊಬ್ಬರು ಸಂಘಟನೆ, ಸೇವೆ ಹಾಗೂ ಸಾಮೂಹಿಕ ಎಂಬ ಮೂರು ಅಂಶಗಳನ್ನು ಅರಿತಾಗ ಮಾತ್ರ ಸದೃಢ ರಾಷ್ಟ್ರದ ನಿರ್ಮಾಣ ಮಾಡಬಹುದು ಎಂದರು.
ಜಿಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಹಿಂದೂ ಸಂಗಮವು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜರುಗುತಿದೆ. ಹಿಂದೆ ನಮ್ಮಲ್ಲಿ ಸಂಘಟನೆಯ ಕೊರತೆ ಇದ್ದ ಕಾರಣ ಪರಕೀಯರು ನಮ್ಮನ್ನು ಆಳಿದರು. ಇದೀಗ ನಾವು ಜಾಗೃತರಾಗಬೇಕಿದೆ. ಒಗ್ಗಟ್ಟಾಗಿ ಸದೃಢ ಸಮಾಜ ನಿರ್ಮಿಸುವ ಅಗತ್ಯವಿದೆ. ಭಾರತವನ್ನು ಉಳಿಸಲು, ಹಿಂದೂ ಧರ್ಮದ ಸಂಸ್ಕೃತಿ ರಕ್ಷಣೆಗೆ ಸರ್ವರೂ ಮುಂದಾಗಬೇಕು ಎಂದರು.ಆರ್ಜಿ ಗ್ರಾಮದ ಕೃಷಿಕರಾದ ಕರ್ತಚಿರ ರತ್ತು ಕಾವೇರಮ್ಮ ಮಾತನಾಡಿ, ನಾವು ಇಂದು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಹಿಂದೂ ಸಂಸ್ಕೃತಿಯು ಅತ್ಯಂತ ಪ್ರಾಚೀನ ಸಂಸ್ಕೃತಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿ, ಧರ್ಮ, ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಅವರು ಮಾತನಾಡಿ, ಸ್ವಾತಂತ್ರ್ಯ ಬಳಿಕ ಭಾರತವು ಇಲ್ಲಿಯವರೆಗೆ ಆರ್ಥಿಕತೆ, ಉತ್ಪಾದನೆ, ಸೈನ್ಯ, ಡಿಜಿಟಲ್ ಎಕಾನಮಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದೆ. ಭಾರತದ ಚರಿತ್ರೆಯ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಸದೃಢ ಸಂಘಟನೆ ಮೂಲಕ ಅನುಷ್ಠಾನವಾಗಬೇಕು ಎಂದರು.ಕಾರ್‍ಯಕ್ರಮದ ಸಂಚಾಲಕ ಜೀವನ್ ಉಪಸ್ಥಿತರಿದ್ದರು. ಸಂಗೀತ ಹಾಗೂ ದೀಕ್ಷಾ ಪ್ರಾರ್ಥಿಸಿ, ಗಣೇಶ್ ಟಿ.ಆರ್. ನಿರೂಪಿಸಿ, ತಾಪಂ ಮಾಜಿ ಸದಸ್ಯ ಗಣೇಶ್ ಬಿ.ಎಂ. ವಂದಿಸಿದರು. ಅದ್ಧೂರಿ ಶೋಭಾ ಯಾತ್ರೆ:
ಆರ್ಜಿ ಗ್ರಾಮದಿಂದ ಶೋಭಾಯಾತ್ರೆ ನಡೆಯಿತು. ಗಣ್ಯರು ಭಗವಾಧ್ವಜ ಹಿಡಿದು ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಭಾರತ ಮಾತೆಗೆ ನಮಿಸಿದರು. ಪೆರಂಬಾಡಿಯ ಚೆಂಡೆ ಬಳಗದವರಿಂದ ಚೆಂದೆ ಸೇವೆ, ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಕ್ಕಳ ಕುಣಿತ ಭಜನೆ ತಂಡ, ವಿನಾಯಕ ಮಹಿಳಾ ಭಜನಾ ಮಂಡಳಿಯ ಭಜನಾವಳಿಯು ಶೋಭಾಯಾತ್ರೆ ಮೆರುಗು ಹೆಚ್ಚಿಸಿತು. ಮಹಿಳೆಯರು ಕಳಸ ಹಿಡಿದು ಸಾಗಿದರು.ಶೋಭಾಯಾತ್ರೆಯು ಪೆರಂಬಾಡಿ ವಾಲ್ಮೀಕಿ ಭವನದವರೆಗೂ ಸಾಗಿತು. ಶೋಭಾಯಾತ್ರೆ ವೇಳೆ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ವಿರಾಜಪೇಟೆ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.