ಉಡುಪಿ: ಹನ್ನೆರಡನೇ ಶತಮಾನದಲ್ಲಿ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆಯಂತಹ ಸಾಮಾಜಿಕ ಸಮಸ್ಯೆಗೊಳಗಾಗಿದ್ದ ಜನರ ಬದುಕಿಗೆ ಆಶಾಕಿರಣವಾದ, ಸಮಾಜದ ಏಳಿಗೆಗೆ, ಸಮಾಜದ ಒಗ್ಗಟ್ಟಿಗೆ ಹಾಗೂ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಾಚಿದೇವ ಅವರ ಆದರ್ಶಗಳು ಇಂದೂ ಮಾದರಿಯಾಗಿದ್ದು, ಅವನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು.ಅವರು ಭಾನುವಾರ ಜಿಲ್ಲಾಡಳಿತ ವತಿಯಿಂದ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು. ಇದರಿಂದ ಭವಿಷ್ಯದಲ್ಲಿ ಬದಲಾವಣೆ ಹಾಗೂ ಜೀವನದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದರು.ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾಚಿದೇವರ ಅವರ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಸಮುದಾಯದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ಸಿಬ್ಬಂದಿ ವರ್ಷ ಬಿ. ಕೋಟ್ಯಾನ್ ನಿರೂಪಿಸಿ, ಶ್ರೀ ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ವಂದಿಸಿದರು.