ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ಕಂಪ್ಯೂಟರ್‌ ಆಪರೇಟರ್‌ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಆ ಕುರಿತು ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಕಂಪ್ಯೂಟರ್‌ ಆಪರೇಟರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಜಾಹೀರಾತು ನೀಡದೆ, ಅರ್ಜಿ ಆಹ್ವಾನಿಸದೆ ಹಣ ನೀಡಿದವರಿಗೆ ಹುದ್ದೆ ನೀಡಲಾಗಿದೆ. ಈ ಬಗ್ಗೆ ತಮ್ಮಲ್ಲಿ ಆಡಿಯೋ ಮತ್ತು ವಿಡಿಯೋ ದಾಖಲೆಗಳಿವೆ. ಈ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಿದ್ದೇವೆ. ತನಿಖೆ ನಡೆದು ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

39 ಮಂದಿ ನೇಮಕ:

ಒಕ್ಕಲಿಗರ ಸಂಘದ ವಿದ್ಯಾ ಸಂಸ್ಥೆಗಳು, ಅದರಲ್ಲೂ ಮುಖ್ಯವಾಗಿ ಆಸ್ಪತ್ರೆಗೆ 18 ಕಂಪ್ಯೂಟರ್‌ ಆಪರೇಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು 2025ರ ಸೆಪ್ಟೆಂಬರ್‌ 17ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಬದಲಾಗಿ 39 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆ ನೇಮಕಾತಿಯಲ್ಲಿ ಪ್ರೊಬೆಷನರಿ ಅವಧಿ ಇರುವುದಿಲ್ಲ. ಆದರೆ ಇವರು ಎರಡು ವರ್ಷ ಪ್ರೊಬೆಷನರಿ ಅವಧಿ ನಿಗದಿಪಡಿಸಿ ಬಳಿಕ ಕಾಯಂ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಾಹೀರಾತು ನೀಡಿಲ್ಲ:

ನಮ್ಮಲ್ಲಿ ಕೇಡರ್‌ ಆ್ಯಂಡ್‌ ರಿಕ್ರೂಟ್‌ಮೆಂಟ್‌(ಸಿ ಅಂಡ್‌ ಆರ್‌) ನಿಯಮಗಳಿವೆ. ಇದರ ಪ್ರಕಾರ ಯಾವುದೇ ಹುದ್ದೆಯನ್ನು ಭರ್ತಿ ಮಾಡಬೇಕಾದರೆ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು, ಯಾವ ಹುದ್ದೆ, ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ, ಅನುಭವ ಏನು ಎಂದು ಹತ್ತು ಹಲವು ನಿಬಂಧನೆಗಳನ್ನು ಹಾಕಿ ನೇಮಕಾತಿ ಮಾಡಿಕೊಳ್ಳಬೇಕು. ಆದರೆ ಇದ್ಯಾವುದನ್ನೂ ಮಾಡದೇ ಕುಟುಂಬಸ್ಥರು, ಸಂಬಂಧಿಕರು, ಹಣ ನೀಡಿದವರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಪತ್ರಿಕೆಯಲ್ಲಿ ಜಾಹೀರಾತು ನೀಡಿಲ್ಲ, ಅರ್ಜಿಗಳನ್ನೂ ಆಹ್ವಾನಿಸಿಲ್ಲ. ಜ್ಯೇಷ್ಠತಾ ಪಟ್ಟಿಯನ್ನೂ ತಯಾರಿಸಿಲ್ಲ, ಸಂದರ್ಶನವನ್ನೂ ನಡೆಸಿಲ್ಲ. ದುಡ್ಡು ಬಂದಾಗಲೆಲ್ಲಾ ಆದೇಶ ಕೊಡುತ್ತಿದ್ದಾರೆಯೇ ಹೊರತು ನೇಮಕಾತಿ ಪಟ್ಟಿ ತಯಾರಿಸಿ ಪ್ರಕಟಿಸಿಲ್ಲ. ಕಂಪ್ಯೂಟರ್‌ ಆಪರೇಟರ್‌ ತೆಗೆದುಕೊಳ್ಳಬೇಕು ಎಂದು ತೀರ್ಮಾನವಾಗಿತ್ತು. ಆದರೆ ಇವರು ಎಸ್‌ಡಿಎ/ಕಂಪ್ಯೂಟರ್‌ ಆಪರೇಟರ್‌ ಎಂದು ತೆಗೆದುಕೊಂಡಿದ್ದಾರೆ. ಕಂಪ್ಯೂಟರ್‌ ಜ್ಞಾನ ಇಲ್ಲದವರನ್ನು ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ ಆಪಾದಿಸಿದರು.

ಕನಿಷ್ಠ ಜ್ಞಾನವೂ ಇಲ್ಲದವರನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ನೇಮಕಾತಿ ಮಾಡಿಕೊಂಡಿದ್ದಾರೆ. ದುಡ್ಡು ಬಂದಂತೆ ಆದೇಶ ಕೊಡುತ್ತಿದ್ದಾರೆಯೇ ಹೊರತು ಲಿಸ್ಟ್‌ ತಯಾರು ಮಾಡಿ ಘೋಷಿಸಿಲ್ಲ. ಇದನ್ನು ವಿರೋಧಿಸಿ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದೇವೆ. ನಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಏನಿದು ಅಕ್ರಮ?

- ಒಕ್ಕಲಿಗರ ಸಂಘದ ವಿದ್ಯಾಸಂಸ್ಥೆಗಳು, ಆಸ್ಪತ್ರೆಗೆ 18 ಕಂಪ್ಯೂಟರ್‌ ಆಪರೇಟರ್‌ಗಳ ಗುತ್ತಿಗೆ ನೇಮಕಾತಿಗೆ ನಿರ್ಧಾರ

- ಆದರೆ 39 ಜನರ ನೇಮಕ. 2 ವರ್ಷಗಳ ಪ್ರೊಬೇಷನರಿ ಅವಧಿ ಮುಗಿದ ಬಳಿಕ ಕಾಯಂ ಮಾಡುವುದಾಗಿ ಭರವಸೆ

- ನಿಯಮ ಪ್ರಕಾರ ಜಾಹೀರಾತು ನೀಡದೆ, ನಿಬಂಧನೆಗಳನ್ನು ವಿಧಿಸದೆ ಬೇಕಾದವರಿಗೆ ನೇಮಕಾತಿ ಪತ್ರ ಹಂಚಿಕೆ

- ಕಂಪ್ಯೂಟರ್‌ ಜ್ಞಾನ ಇಲ್ಲದವರಿಗೂ ಹುದ್ದೆ ನೀಡುವ ಮೂಲಕ ಸಂಘದಲ್ಲಿ ಭಾರಿ ಭ್ರಷ್ಟಾಚಾರ: ಕೋನಪ್ಪ ರೆಡ್ಡಿ

- ಇದಕ್ಕೆ ಆಡಿಯೋ, ವಿಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ. ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್‌ ದಾಖಲಿಸುವೆ: ರೆಡ್ಡಿ