ಸೋಮರಡ್ಡಿ ಅಳವಂಡಿ ಕೊಪ್ಪಳ
ಅಷ್ಟೇ ಅಲ್ಲ, ಪ್ರೀತಿಸಿದ ಯುವಕನಿಗಾಗಿ ಮುಸ್ಲಿಂ ಯುವತಿ ಧರ್ಮದ ಕಟ್ಟಳೆ ಮೀರಿ ಬಿಂದಿ ಧರಿಸಿ ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಕೊಪ್ಪಳ ಸಮೀಪದ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ತಾಲೂಕಿನ ಅಳವಂಡಿ ಗ್ರಾಮದ ಚಂದ್ರಕಲಾ ಹಾಗೂ ಸಿದ್ದರಡ್ಡಿ ಬಿಸನಹಳ್ಳಿ ಎಂಬುವರ ಮಗ ವೆಂಕಟೇಶರಡ್ಡಿ ಹಾಗೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಮಮ್ತಾಜಿ ಹಾಗೂ ಬಾಷುಸಾಬ್ ಕಟ್ಟಿಮನಿ ಅವರ ಪುತ್ರಿ ಶಹೀನಾ ಮದುವೆ ಇಲ್ಲಿಗೆ ಸಮೀಪದ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎರಡು ಕುಟುಂಬದವರು ಹಾಗೂ ಎರಡು ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ವಾದ್ಯವೃಂದ, ಮಂತ್ರ ಪಠಣ ಮೂಲಕ ವಿವಾಹ ನೆರವೇರಿತು.ಒಂಬತ್ತು ವರ್ಷದ ಪ್ರೀತಿ:
ಭಾರಿ ವಿರೋಧ ವ್ಯಕ್ತವಾದರೂ ಹಠಬಿಡದೆ ತಮ್ಮ ಮನೆಯ ಹಿರಿಯರನ್ನು ಒಪ್ಪಿಸಿ, ತಮ್ಮ ಪ್ರೀತಿ ಗೆಲ್ಲಿಸಿ, ವಿವಾಹ ಎಂಬ ಶಾಶ್ವತ ಬಂಧನಕ್ಕೆ ಎಲ್ಲ ಬಂಧು-ಬಾಂಧವರ ಎದುರು ಒಳಗಾಗಿದ್ದಾರೆ.
ಶಹೀನಾ ತನ್ನ ಧರ್ಮದ ಕಟ್ಟಳೆ ಮೀರಿ ಹಿಂದೂ ಸಂಪ್ರದಾಯ ಪಾಲಿಸಿ, ಬಿಂದಿ ಇಟ್ಟುಕೊಂಡು ಸಪ್ತಪದಿ ತುಳಿದು ಮಂತ್ರ ಪಠಣಗಳೊಂದಿಗೆ ಮಾಂಗಲ್ಯ ಕಟ್ಟಿಸಿಕೊಳ್ಳುವ ಮೂಲಕ ''''ಜಾನಕಿ''''ಯಾಗಿದ್ದಾರೆ. ಒಂಬತ್ತು ವರ್ಷಗಳ ಪ್ರೀತಿ ಎನ್ನುವ ತಪಸ್ಸು ಮಾಡಿದ ಯುವಕ, ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲೇಬೇಕು ಎಂದು ಹಠತೊಟ್ಟು ಗೆದ್ದಿದ್ದಾನೆ. ಇದು ಪ್ರೀತಿಯ ಮದುವೆ, ಇಲ್ಲಿ ಜಾತಿ, ಧರ್ಮಕ್ಕೆ ಅವಕಾಶ ಇಲ್ಲ ಎಂದು ಸಾರಿ ಹೇಳಿದ್ದಾನೆ.
ಕುಟುಂಬದವರೆಲ್ಲರೂ ಸೇರಿ ಮದುವೆ ಮಾಡಿದ್ದೇವೆ. ಕದ್ದು ಮುಚ್ಚಿ ಮಾಡುವುದಕ್ಕಿಂತ ಹೀಗೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದು ಒಳ್ಳೆಯದಲ್ಲವೇ? ಎಂದು ವಧುವಿನ ಸಂಬಂಧಿ ಬಾಬುಸಾಬ್ ತಿಳಿಸಿದ್ದಾರೆ.