ಸಂಖ್ಯಾ ಬಲವಿದ್ದ ಕಾಂಗ್ರೆಸ್‌ಗೆ ತನ್ನದೇ ಬೆಂಬಲಿತ ನಿರ್ದೇಶಕರ ಕ್ರಾಸ್‌ ಓಟ್‌ ಹೊಡೆತ ನೀಡಿದ್ದು, ಪಕ್ಷದೊಳಗಿನ ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ಹುಟ್ಟಿಸಿದೆ

ಕುಷ್ಟಗಿ: ಸಂಖ್ಯಾ ಬಲದಲ್ಲಿ ಸ್ಪಷ್ಟ ಮೇಲುಗೈ ಹೊಂದಿದ್ದರೂ ರಾಜಕೀಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಕುಷ್ಟಗಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ.

ಪಿಕಾರ್ಡ್‌ ಬ್ಯಾಂಕಿನ ಒಟ್ಟು 14 ನಿರ್ದೇಶಕರ ಪೈಕಿ ಕಾಂಗ್ರೆಸ್ ಬೆಂಬಲಿತ 9 ಹಾಗೂ ಬಿಜೆಪಿ ಬೆಂಬಲಿತ 5 ನಿರ್ದೇಶಕರಿದ್ದಾರೆ. ಆದರೆ ಶನಿವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲದ ನಿರ್ದೇಶಕ ಕಡಿವಾಲ್ ಗ್ರಾಮದ ಶಿವಯ್ಯ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಶ್ಯಾಮರಾವ್ ಕುಲಕರ್ಣಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿರುವುದು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಿದೆ ಎನ್ನಲಾಗಿದೆ.

ಸಂಖ್ಯಾ ಬಲವಿದ್ದ ಕಾಂಗ್ರೆಸ್‌ಗೆ ತನ್ನದೇ ಬೆಂಬಲಿತ ನಿರ್ದೇಶಕರ ಕ್ರಾಸ್‌ ಓಟ್‌ ಹೊಡೆತ ನೀಡಿದ್ದು, ಪಕ್ಷದೊಳಗಿನ ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆ ಹುಟ್ಟಿಸಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಗೋಪಾಲರಾವ್ ಕುಲಕರ್ಣಿ ಅವರಿಂದ ರಾಜೀನಾಮೆ ಕೊಡಿಸಿದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನೂ ಸುಮಾರು ಮೂರೂವರೆ ವರ್ಷಗಳ ಅಧಿಕಾರಾವಧಿ ಬಾಕಿ ಇರುವಾಗ ನಡೆದ ಈ ಚುನಾವಣೆ ಸ್ಥಳೀಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುತ್ತಿದ್ದಂತೆ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾಂಕ್ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಶಾಸಕ ದೊಡ್ಡನಗೌಡ ಪಾಟೀಲ್ ಅವರನ್ನು ಭೇಟಿಯಾಗಿ ಸಿಹಿ ಹಂಚಿ ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕೆ ಮಹೇಶ, ಚಂದ್ರಶೇಖರ್ ನಾಲತ್ವಾಡ್, ರವಿಕುಮಾರ್ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ವಿಜಯ್ ಹಿರೇಮಠ, ಮಹಾಂತಯ್ಯ ಅರಳೆಲಿಮಠ, ಸುರೇಶ್ ಮಂಗಳೂರು ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.