ಭಗತ್ ಸಿಂಗ್ ಹಾಗೂ ನೇತಾಜಿ ಹೋರಾಟ ಕೇವಲ ಬ್ರಿಟಿಷರಿಂದ ದೇಶ ಮುಕ್ತಗೊಳಿಸುವುದಕ್ಕೆ ಸೀಮಿತವಾಗಿರಲಿಲ್ಲ

ಕೊಪ್ಪಳ: ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ, ಭಗತ್ ಸಿಂಗ್, ನೇತಾಜಿ ಸೇರಿದಂತೆ ಮಹಾನ್ ವ್ಯಕ್ತಿಗಳ ಆದರ್ಶ ಮೈಗೂಡಿಸಿಕೊಂಡು ಅನ್ಯಾಯ ಹಾಗೂ ಶೋಷಣೆಯ ವಿರುದ್ಧ ಹೋರಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ ಹೇಳಿದರು.

ನಗರದ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದಲ್ಲಿ ಎಐಡಿಎಸ್ಓ ಜಿಲ್ಲಾ ಸಮಿತಿಯಿಂದ ನಡೆದ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಭಗತ್ ಸಿಂಗ್ ಹಾಗೂ ನೇತಾಜಿ ಹೋರಾಟ ಕೇವಲ ಬ್ರಿಟಿಷರಿಂದ ದೇಶ ಮುಕ್ತಗೊಳಿಸುವುದಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಸಮಾಜದಲ್ಲಿ ಮೂಲಭೂತ ಬದಲಾವಣೆ ಹಾಗೂ ಸಮಾಜವಾದಿ ಭಾರತ ನಿರ್ಮಾಣ ಅವರ ಕನಸಾಗಿತ್ತು. ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಬಡತನ, ನಿರುದ್ಯೋಗ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದರು.

ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರವಿಕಿರಣ್ ಮಾತನಾಡಿ, ಪ್ರತಿಯೊಂದು ಮಗುವಿಗೂ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯಬೇಕು ಎಂದು ಜ್ಯೋತಿರಾವ್ ಫುಲೆ ಹೋರಾಡಿದ್ದರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದರು.

ಶಿಬಿರದಲ್ಲಿ ಪವಾಡ ರಹಸ್ಯ ಬಯಲು, ಸಿನಿಮಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ತುಳಜರಾಮ್ ಎನ್.ಕೆ., ಸಿಂಧು ಕೌದಿ, ಗಂಗಾರಾಜ ಅಳ್ಳಳ್ಳಿ, ಪ್ರದೀಪ್, ಶರಣಪ್ಪ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.