ಅಂಬೇಡ್ಕರ್ ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ ಅಪಾರ ಜ್ಞಾನ ಸಂಪಾದಿಸಿದ್ದರು

ಕೊಪ್ಪಳ: ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಹಾಗೂ ಅಧ್ಯಯನಶೀಲತೆ ಬೆಳೆಸಲು ಡಾ.ಬಿ.ಆರ್. ಅಂಬೇಡ್ಕರ್ ಜೀವನ ಮತ್ತು ಬರಹಗಳ ಅಧ್ಯಯನ ಪ್ರೇರಣೆ ನೀಡುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್.ಜಗದೀಶ್ ಹೇಳಿದರು.

ಭಾಗ್ಯನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಆಧುನಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಹೊರಬಂದು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಬೇಡ್ಕರ್ ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ ಅಪಾರ ಜ್ಞಾನ ಸಂಪಾದಿಸಿದ್ದರು. ಅವರ ಜ್ಞಾನ ಮತ್ತು ಚಿಂತನೆ ದೇಶ ಮೆಚ್ಚುವ ಸಂವಿಧಾನ ರಚನೆಗೆ ಕಾರಣವಾದವು. ಸಹಬಾಳ್ವೆ, ಮಾನವ ಪ್ರೀತಿ ಹಾಗೂ ಸಹೋದರತ್ವದ ನೆಲೆಯಲ್ಲಿ ಸಂವಿಧಾನ ಗೌರವಿಸುವುದೇ ನಿಜವಾದ ದೇಶಪ್ರೇಮ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಬದುಕು,ಬರಹ ಹಾಗೂ ವಿಚಾರ ಪರಿಚಯಿಸಲು ವಿಶೇಷ ಉಪನ್ಯಾಸ, ಪ್ರಬಂಧ ಹಾಗೂ ರಸಪ್ರಶ್ನೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಮಾಜಕ್ಕೆ ಡಿಜೆ ಸದ್ದಿಗಿಂತ ಸಂವಿಧಾನದ ಧ್ವನಿ, ಫ್ಲೆಕ್ಸ್‌ಗಳಿಗಿಂತ ಮೌಲ್ಯ ಹಾಗೂ ಮೆರವಣಿಗೆಗಿಂತ ಮಾನವೀಯತೆ ಮುಖ್ಯ ಎಂದರು.

ಉಪನ್ಯಾಸಕ ಡಾ.ರಾಜಕುಮಾರ್ ಡಿ.ಎಸ್.ಮಾತನಾಡಿ, ಅವಕಾಶ ವಂಚಿತರು, ಶೋಷಿತರು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ಅಂಬೇಡ್ಕರ್ ಹೋರಾಡಿದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅವರ ತತ್ವ ಇಂದಿಗೂ ನಮಗೆ ಪ್ರೇರಣೆಯಾಗಿವೆ ಎಂದರು.

ಪ್ರಾಚಾರ್ಯ ಬಸವರಾಜ ವಸ್ತ್ರದ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹನುಮಂತಪ್ಪ, ಎಂ.ಆರ್.ಲೀನಾ, ಬಸವರಾಜ ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನವಾಗಿ ವಿತರಿಸಲಾಯಿತು.