ಹಿಂದುತ್ವ, ಸಂಸ್ಕೃತಿ ರಕ್ಷಣೆಗೆ ಒಂದಾಗಿ: ಪರಮಾತ್ಮನಂದ ಸ್ವಾಮೀಜಿ

KannadaprabhaNewsNetwork | Published : Dec 7, 2024 12:30 AM

ಸಾರಾಂಶ

ಈಗಲಾದರೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಪರವಾಗಿ ಧ್ವನಿಯಾಗಬೇಕು. ವಿಶ್ವದಲ್ಲಿ ನಡೆಯುತ್ತಿರುವ ಮುಸ್ಲಿಂ ಜೀಹಾದ್ ವಿರುದ್ಧ ಪ್ರತ್ಯುತ್ತರ ನೀಡಲು ತಯಾರಿ ಮಾಡಬೇಕು.

ಧಾರವಾಡ:

ಹಿಂದುತ್ವ, ಹಿಂದೂ ಸಂಸ್ಕೃತಿಯ ರಕ್ಷಣೆಗೆ ಹಿಂದೂಗಳು ಒಂದಾಗಬೇಕು. ನಮ್ಮ ಮೇಲೆ ದೌರ್ಜನ್ಯ ನಡೆದಾಗ ಪ್ರತ್ಯುತ್ತರ ನೀಡುವ ಗಟ್ಟಿತನ ಪ್ರತಿಯೊಬ್ಬ ಹಿಂದೂಗಳಲ್ಲಿ ಬರಬೇಕು ಎಂದು ದ್ವಾರಪುರ ಪರಮಾತ್ಮ ಮಹಾಸಂಸ್ಥಾನ ಮಠದ ಪರಮಾತ್ಮನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿಯ ಕಡಪಾ ಮೈದಾನದಲ್ಲಿ ಧಾರವಾಡ ಸದ್ಭಾವ ವೇದಿಕೆಯಿಂದ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಹಿರಂಗ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂಗಳು ಶಾಂತಿ ಬಯಸುವ ನಿಟ್ಟಿನಲ್ಲಿ ಕೇವಲ ಪ್ರತಿಭಟನೆ ಮಾಡುವ ಬದಲು ಒಗ್ಗಟ್ಟಾಗಿ ಉತ್ತರ ನೀಡುತ್ತಿಲ್ಲ. ಹೀಗಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹಾಗೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದರೂ ಜಾಗತಿಕ ಮಟ್ಟದ ಸಂಘಟನೆಗಳು ಬಾಯಿ ಮುಚ್ಚಿಕೊಂಡು ಕುಳಿತಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

ಈಗಲಾದರೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಪರವಾಗಿ ಧ್ವನಿಯಾಗಬೇಕು. ವಿಶ್ವದಲ್ಲಿ ನಡೆಯುತ್ತಿರುವ ಮುಸ್ಲಿಂ ಜೀಹಾದ್ ವಿರುದ್ಧ ಪ್ರತ್ಯುತ್ತರ ನೀಡಲು ತಯಾರಿ ಮಾಡಬೇಕು. ನಾವು ಒಂದಾಗದೇ ಇದ್ದರೇ ಇನ್ನೂ ಹತ್ತು ಇಪ್ಪತ್ತು ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಭಾರತದಲ್ಲೂ ನಡೆಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ನಾವು ಯಾವುದೇ ರಾಜಕೀಯ ಪಕ್ಷದಲ್ಲಿ ಇದ್ದರೂ ಹಿಂದೂಗಳು ಎಂಬುವುದನ್ನು ಮರೆಯಬಾರದು. ರಾಜಕೀಯ ಲಾಭಕ್ಕಾಗಿ ಹಿಂದೂ ವಿರೋಧಿ ಮಾತನಾಡುವುದು ಸರಿಯಲ್ಲ. ಇಂದು ಬಾಂಗ್ಲಾದೇಶದ ಹಿಂದೂಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಹಿಂದೂಗಳು ಶಾಂತಿಯಿಂದ ನಡೆದುಕೊಂಡರೇ ಏನು ಪ್ರಯೋಜನ ಇಲ್ಲ. ನಾವು ಒಗಟ್ಟಾಗಿ ತಕ್ಕ ಪ್ರತ್ಯುತ್ತರ ನೀಡಬೇಕು. ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ ಸಾವಿರಾರು ಹಿಂದೂಗಳು ನಾಪತ್ತೆ ಆಗುತ್ತಿದ್ದಾರೆ. ಈ ಕುರಿತು ಜಾಗೃತಿ ಹೊಂದಬೇಕು. ಧಾರ್ಮಿಕತೆಯ ಆಧಾರದ ಮೇಲೆ ದಾಳಿ ಮಾಡುವವರಿಗೆ ತಕ್ಕ ಪಾಠ ಕಲಿಸುವ ಅವಶ್ಯಕತೆ ಇದೆ ಎಂದರು.

ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ, ಈರೇಶ ಅಂಚಟಗೇರಿ, ದೇವರಹುಬ್ಬಳ್ಳಿ ಮಠದ ಸಿದ್ದಶಿವಯೋಗಿ ಸ್ವಾಮೀಜಿ, ಕವಲಗೇರಿ ಶಿವಾನಂದ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ಕಲ್ಲೂರ ಮಠದ ಲಲಿತಮ್ಮ, ಅಮ್ಮಿನಭಾವಿ ಮಠದ ಅಭಿನವ ಶಾಂತಲಿಂಗ ಸ್ವಾಮೀಜಿ ಇದ್ದರು. ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಯಿತು.

Share this article