ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ಸು
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾದ ಮಂಜುನಾಥ ಹಾಗೂ ಮೇಘಾ ರೈತ ದಂಪತಿಗೆ ಹುಟ್ಟಿದ್ದ 2ನೇ ಮಗು ಗಂಡಾಗಿತ್ತು. ಚೊಚ್ಚಿಲ ಹೆಣ್ಣುಮಗು. 2ನೇಯದ್ದು ಪುತ್ರ ಸಂತಾನವಾಯಿತು ಎಂದು ಹಿಗ್ಗಿದ ಈ ದಂಪತಿ ಪ್ಯಾಮಿಲಿ ಪ್ಲ್ಯಾಂನಿಂಗ್ ಚಿಕಿತ್ಸೆ ಕೂಡಾ ಮಾಡಿಸಿಕೊಂಡಿದ್ದರು.ಆದರೇ ವಿಧಿಯಾಟ ಬೇರೆನೇ ಆಗಿತ್ತು. ಮೇಘಾ-ಮಂಜುನಾಥ್ ದಂಪತಿಯ ಪಂಚಪ್ರಾಣ ಗಂಡು ಮಗುವಿಗೆ ನಿರಂತರ ಉಸಿರಾಟದ ತೊಂದರೆ, ಕಫ ಕಟ್ಟೋದು ಶುರುವಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ದಂಪತಿ ಆಸ್ಪತ್ರೆ ಅಲೆದದ್ದೇ ಬಂತು. ಮಗುವಿಗೆ ಏನಾಗಿದೆ ಎಂಬುದು ನಿಖರವಾಗಿ ಆರಂಭದಲ್ಲಿ ಗೊತ್ತಾಗಲೇ ಇಲ್ಲ.
ನ.18ರಂದು ನಿಂಬರ್ಗಾದಿಂದ ಮಂಜುನಾಥ-ಮೇಘಾ ದಂಪತಿ ಮಗುವಿನೊಂದಿಗೆ ಯಶೋಧರಾ ಆಸ್ಪತ್ರೆಗೆ ಆಗಮಿಸಿದ ಅವರು, ಅಂದೇ ಆಡ್ಮಿಟ್ ಆದ ಪುಟಾಣಿಗೆ ಮಾರಣಾಂತಿಕ ಸಮಸ್ಯೆ ಕಾಡ್ತಿರೋದು ಪತ್ತೆ ಹಚ್ಚಿದೆವು. ಮಕ್ಕಳ ಶಸ್ತ್ರಜ್ಞ ಡಾ.ಕೃಷ್ಣ ಇಂದುವಾಸಿ, ಅರುವಳಿಕೆ ತಜ್ಞ ಡಾ.ಮಲ್ಲಿಕಾರ್ಜುನ್, ಚಿಕ್ಕಮಕ್ಕಳ ವೈದ್ಯರಾದ ಡಾ.ದೀಪಾ, ಡಾ.ಪ್ರಶಾಂತ ಚವ್ಹಾಣ್ ಒಳಗೊಂಡ ತಂಡದ ಜೊತೆಗೂಡಿ ನ.26 ರಂದು ಕ್ಲಿಷ್ಚಕರವಾಗಿದ್ದ ಶಸ್ತ್ರ ಚಿಕಿತ್ಸೆಯನ್ನ ಕಲಬುರಗಿಯಲ್ಲೇ ಮಾಡಿ ಯಶ ಕಂಡಿದ್ದೇವೆ. ಇದು ಕಲ್ಯಾಣ ಕರ್ನಾಟಕದಲ್ಲೇ ಮೊಟ್ಟ ಮೊದಲ ಡಯಾಫ್ರಾಮ್ ಹರ್ನಿಯಾ ಶಸ್ತ್ರ ಚಿಕಿತ್ಸೆಯಾಗಿ ದಾಖಲಾಗಿದೆ ಎಂದು ಯಶೋಧರಾ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಪ್ರಶಾಂತ ಕುಲಕರ್ಣಿ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿ ವೈದ್ಯರ ತಂಡದ ಶ್ರಮ, ಏಕಾಗ್ರತೆಯ ಕಾರ್ಯಾಚರಣೆಯನ್ನ ಕೊಂಡಾಡಿದ್ದಾರೆ.
ಏನಿದು ಜನ್ಮಜಾತ ಡಯಾಫ್ರಾಮ್ ಹರ್ನಿಯಾ
ಹೊಟ್ಟೆಯೊಳಗಿನ ಅಂಗಾಂಗಗಳೆಲ್ಲ ಎದೆಗೂಡಿಗೆ ಬಂದಾಗ ಎದೆ ಗೂಡಲ್ಲಿರಬೇಕಾಗಿದ್ದ ಶ್ವಾಸಕೋಶ, ಪುಪ್ಪುಸ, ಹೃದಯ ಇವೆಲ್ಲವೂ ಎದೆ ಗೂಡಿನ ಎಡದಿಂದ ಬಲಕ್ಕೆ ಶಿಫ್ಟ್ ಆಗಿಬಿಟ್ಟು ಕೂಸಿಗೆ ನಿರಂತರ ಶ್ವಾಸೋಚ್ವಾಸಕ್ಕೇ ಅಡಚಣೆ ತಂದೊಡ್ಡಿದ್ದವು. ಸಿಟಿ ಸ್ಕ್ಯಾನ್ ಸೇರಿ ಹಲವು ಹತ್ತು ಪರೀಕ್ಷೆಗಳ ಮೂಲಕ ವಪೆಯ ರಂಧ್ರ, ಖಾಲಿ ಹೊಟ್ಟೆ, ಎದೆಗೂಡಲ್ಲಿ ಕರಳು ಇವನ್ನೆಲ್ಲ ಪತ್ತೆ ಹಚ್ಚಿದ ಕಲಬುರಗಿ ಯಶೋಧರಾ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಈ ವಿರಳ ಕಾಯಿಲೆಗೆ ಲ್ಯಾಪ್ರೋಸ್ಕಾಪಿಕ್ ಸರ್ಜರಿ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.
ಜನ್ಮಜಾತ ಡಯಾಫ್ರಾಮ್ ಹರ್ನಿಯಾ ಇರುವ ಮಕ್ಕಳಲ್ಲಿ ತಾಯಿ ಗರ್ಭದಲ್ಲಿದ್ದಾಗಲೇ ಸಾವಿಗೊಳಗಾಗುವ ಸಂದರ್ಭವೆ ಹೆಚ್ಚು. ಇಂತಹ ವಿರಳ ಕಾಯಿಲಿಗೆ ಯಶೋಧರಾ ಆಸ್ಪತ್ರೆಯಲ್ಲೇ ಯಶಸ್ವಿ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮಾಡಿದ್ದೇವೆ. ಇಂತಹ ಗಂಭೀರ ಕಾಯಿಲೆಯಿಂದ ನರಳುತ್ತಿದ್ದ ನಿಂಬರ್ಗಾ ಮಗುವಿಗೆ ಚಿಕಿತ್ಸೆ ನೀಡಿದ ತೃಪ್ತಿ ನಮ್ಮ ಆಸ್ಪತ್ರೆ ವೈದ್ಯರ ತಂಡದ್ದಾಗಿದೆ.
-ಡಾ.ಕೃಷ್ಣ ಇಂದುವಾಸಿ, ಚಿಕ್ಕಮಕ್ಕಳ ಶಸ್ತ್ರಜ್ಞರು, ಕಲಬುರಗಿ
ಮಗು ಹುಟ್ಟಿದಾಗಿನಿಂದ ಉಸಿರಾಟದ ತೊಂದರೆ ಎದುರಿಸುತಿತ್ತು. ಎಲ್ಲಾಕಡೆ ಸುತ್ತಿದ್ವಿ, ಕಫ ತೆಗೆದು ಕಳುಹಿಸುತ್ತಿದ್ದರು. ಯಶೋಧರಾ ಆಸ್ಪತ್ರೆಗೆ ಬಂದಾಗ ಕೂಸಿಗೆ ಕಾಡುತ್ತಿರೋ ಕಾಯಿಲೆ ಕಂಡು ಹಿಡಿದರು. ನಮಗೆಲ್ಲಾ ತಿಳಿಸಿ ಹೇಳಿ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ನಾವು ಯಶೋಧರಾ ವೈದ್ಯರಿಗೆ ಧನ್ಯವಾದ ಹೇಳಬೇಕು.
-ಮಂಜುನಾಥ-ಮೇಘಾ, ಮಗುವಿನ ಪೋಷಕರು