- ವಿಶ್ವ ಸಮುದಾಯದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕು: ಇಸ್ಕಾನ್ ಮುಖ್ಯಸ್ಥ ಚಂದ್ರಹಾಸ ಹರಿಕೃಷ್ಣ ಒತ್ತಾಯ - ಮತಾಂಧರರಿಂದ ನಾಶಗೊಂಡ ಹಿಂದುಗಳ ಮನೆ, ದೇವಾಲಯ, ಆಸ್ತಿಗಳ ಪುನನಿರ್ಮಾಣ ಕ್ರಮಕ್ಕಾಗಿ ಪ್ರಧಾನಿಗೆ ಆಗ್ರಹ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು ಸಮುದಾಯದ ರಕ್ಷಣೆ ಹಾಗೂ ಅಲ್ಲಿಯ ಇಸ್ಕಾನ್‌ನ ಸಂತ ಚಿನ್ಮಯ್ ಕೃಷ್ಣದಾಸ್ ಅವರ ಬಿಡುಗಡೆ ಹಾಗೂ ಮತಾಂಧರ ದಾಳಿಯಿಂದ ನಾಶಗೊಂಡ ಹಿಂದುಗಳ ಮನೆ, ದೇವಾಲಯ, ಆಸ್ತಿಗಳನ್ನು ಪುನಾ ನಿರ್ಮಿಸುವಂತೆ ವಿಶ್ವ ಸಮುದಾಯದ ಮೂಲಕ ಬಾಂಗ್ಲಾ ದೇಶದ ಮೇಲೆ ಒತ್ತಡ ಹೇರುವಂತೆ ದಾವಣಗೆರೆ ಹಿಂದೂ ಹಿತರಕ್ಷಣಾ ಸಮಿತಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿತು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ಕಾನ್ ಸಂಸ್ಥೆಯ ದಾವಣಗೆರೆ ಮುಖ್ಯಸ್ಥ ಅವಧೂತ ಚಂದ್ರಹಾಸ ಹರಿಕೃಷ್ಣ ಅವರು, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರ ದಾಳಿ, ಹಲ್ಲೆ ಮಾಡಲಾಗುತ್ತಿದೆ. ಈ ದಾಳಿ ತಡೆದು, ಹಿಂದುಗಳು ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದರು.
ಭಾರತವು ಹಿಂದಿನಿಂದಲೂ ವಿಶ್ವಾದ್ಯಂತ ಕಿರುಕುಳಕ್ಕೆ ಒಳಗಾದ ವಲಸಿಗರಿಗೆ ಸಹಾಯ ಮಾಡಿಕೊಂಡು ಬಂದ ದೇಶ. ಇದೀಗ ಹಿಂದುಗಳೇ ನೆರೆಯ ಬಾಂಗ್ಲಾದಲ್ಲಿ ದೌರ್ಜನ್ಯ, ಶೋಷಣೆ, ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಭಾರತ ನಿರ್ಲಕ್ಷ್ಯ ತೋರಬಾರದು ಎಂದು ಒತ್ತಾಯಿಸಿದರು.ಬಾಂಗ್ಲಾ ದೇಶದ ಇಸ್ಕಾನ್‌ನ ಹಿಂದು ಸಂತ ಚಿನ್ಮಯ್ ಕೃಷ್ಣದಾಸ್ ಅವರನ್ನು ಬಂಧಿಸಿರುವ ಅಲ್ಲಿನ ಸರ್ಕಾರವು ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ತಕ್ಷಣವೇ ಚಿನ್ಮಯ್ ಕೃಷ್ಣದಾಸ ಅವರನ್ನು ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರವು ಅಂತರ ರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುವ ಮೂಲಕ ಬಾಂಗ್ಲಾದ ಮೇಲೆ ರಾಜತಾಂತ್ರಿಕ ಒತ್ತಡ ತಂದು, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಜೀವ, ಜೀವನ, ಆಸ್ತಿ, ದೇವಸ್ಥಾನ, ಮಠ, ಶ್ರದ್ಧಾಕೇಂದ್ರ, ಉದ್ಯೋಗ, ವ್ಯಾಪಾರ ಹೀಗೆ ಎಲ್ಲದರ ರಕ್ಷಣೆಗೆ ಮುಂದಾಗಬೇಕು ಎಂದರು.
ಮಾಜಿ ಮೇಯರ್, ಬಿಜೆಪಿ ಮುಖಂಡ ಎಸ್.ಟಿ.ವೀರೇಶ ಮಾತನಾಡಿ, ಬಾಂಗ್ಲಾ ಸರ್ಕಾರವು ಪ್ರಜಾಪ್ರಭುತ್ವ, ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಮತೀಯ ಉಗ್ರಗಾಮಿಗಳ ಪ್ರಭಾವಕ್ಕೊಳಗಾಗಿ ಅಲ್ಲಿನ ಹಿಂದುಗಳ ಮೇಲೆ ಸುಳ್ಳು ಪ್ರಕರಣಗಳ ದಾಖಲಿಸಿರುವುದನ್ನು ಹಿಂಪಡೆಯಬೇಕು. ನೆರೆಯ ದೇಶದ ಹಿಂದುಗಳು, ಹಿಂದುಗಳ ಶ್ರದ್ಧಾ ಕೇಂದ್ರಗಳು, ಧಾರ್ಮಿಕರ ನೇತಾರರ ಮೇಲೆ ನಡೆದಿರುವ ದೌರ್ಜನ್ಯ ತಡೆಗೆ ನಮ್ಮ ದೇಶದ ಪ್ರಧಾನಿಗಳು ಜಾಗತಿಕ ಒತ್ತಡ, ರಾಜಕೀಯ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.ಹಿಂದು ಪರ ಸಂಘಟನೆಗಳ ಮುಖಂಡರಾದ ಸತೀಶ ಪೂಜಾರಿ, ಸಿದ್ದಲಿಂಗ ಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಟಿ.ಆರ್.ಕೃಷ್ಣಪ್ಪ, ಎಚ್.ಪಿ. ವಿಶ್ವಾಸ್, ರಾಜು, ಹಿರಿಯ ವಕೀಲ ಉಚ್ಚಂಗಿದುರ್ಗ ಬಸವರಾಜ ಇತರರು ಇದ್ದರು.
- - -ಬಾಕ್ಸ್ * ನಾಳೆ ಪ್ರತಿಭಟನೆ
ದಾವಣಗೆರೆ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಇಸ್ಕಾನ್‌ನ ಹಿಂದು ಸಂತ ಚಿನ್ಮಯಿ ಕೃಷ್ಣದಾಸ್ ರಕ್ಷಣೆಗೆ ಆಗ್ರಹಿಸಿ ಡಿ.4ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30 ಗಂಟೆಗೆ ಶ್ರೀ ಜಯದೇವ ವೃತ್ತದಲ್ಲಿ ಹಿಂದು ಸಮುದಾಯದಿಂದ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು. ಸಮಸ್ತ ಹಿಂದು ಸಮುದಾಯ ಬಾಂಧವರು, ವಿದ್ಯಾರ್ಥಿ, ಯುವಜನರು, ತಾಯಂದಿರು ಪಾಲ್ಗೊಳ್ಳುವಂತೆ ಅವಧೂತ ಚಂದ್ರಹಾಸ ಹರಿಕೃಷ್ಣ ಮನವಿ ಮಾಡಿದರು.- - - -2ಕೆಡಿವಿಜಿ1.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಇಸ್ಕಾನ್ ಸಂಸ್ಥೆ ಸ್ಥಳೀಯ ಮುಖ್ಯಸ್ಥ ಅವಧೂತ ಚಂದ್ರಹಾಸ ಹರಿಕೃಷ್ಣ ಸುದ್ದಿಗೋಷ್ಠಿ ನಡೆಸಿ, ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆ, ಇಸ್ಕಾನ್ ಸಂತ ಕೃಷ್ಣದಾಸ್ ಬಿಡುಗಡೆಗೆ ಒತ್ತಾಯಿಸಿದರು.