ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹಿರೇಬೆಣಕಲ್ ಶಿಲಾಯುಗದ ಕಲೆ, ಸಂಸ್ಕೃತಿಯ ಬೀಡು ಎನಿಸಿಕೊಂಡಿದೆ ಎಂದು ತುಮಕೂರಿನ ಸಿದ್ದಗಂಗಾಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಹಿರೇಬೆಣಕಲ್ ಶಿಲಾಯುಗದ ನಾಗರಿಕತೆಯ ವೈಶಿಷ್ಯತೆ ಹೊಂದಿರುವ ಸ್ಥಳವಾಗಿದೆ. ಇಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಬದಕುವ ರೀತಿಯನ್ನು ಕಲ್ಲು ಬಂಡೆಗಳು ಮತ್ತು ಗುಹಾ ಚಿತ್ರಗಳ ಮೂಲಕ ತಿಳಿ ಹೇಳಿದ ಐತಿಹಾಸಿಕ ಸ್ಥಳವಾಗಿದೆ ಎಂದರು. ಗ್ರಾಮದ ಜನರು ಹಿರೇಬೆಣಕಲ್‌ನಲ್ಲಿರುವ ಇತಿಹಾಸವನ್ನು ಉಳಿಸಿ ಬೆಳಸಬೇಕಾಗಿದೆ. ಇಲ್ಲಿಯ ಜನರ ಆಸೆಯಂತೆ ಈ ಪುರಾತನ ಇತಿಹಾಸ ಇರುವ ಶಿಲಾ ಸಮಾಧಿಗಳ ಪ್ರದೇಶ ಯುನೋಸ್ಕೋ ಪಟ್ಟಿಗೆ ಸೇರ್ಪಡೆಯಾಗಬೇಕಿದೆ, ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಹಳೇ ವಿದ್ಯಾರ್ಥಿಗಳು ತಮ್ಮನ್ನು ಕರೆಯಿಸಿ ಇಂತಹ ಇತಿಹಾಸವಿರುವ ಪ್ರದೇಶವನ್ನು ವೀಕ್ಷಿಸಲು ಅಹ್ವಾನಿಸಿರುವದು ಸಂತಸ ತಂದಿದೆ ಎಂದರು.
ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸನಗೌಡ ಹೊಸಳ್ಳಿ, ವೀರೇಶ ಅಂಗಡಿ, ಚಂದ್ರಶೇಖರ ಕುಂಬಾರ, ಹುಸೇನ್ ಪಾಷಾ, ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.