ಕುಷ್ಟಗಿ: ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕೃತಿಯ ತವರೂರು ಎಂದು ಗುರುತಿಸಿಕೊಂಡಿರುವ ತಾಲೂಕಿನ ಹಿರೇಮನ್ನಾಪುರ ಗ್ರಾಮ ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.
2006ರಲ್ಲಿ ಕುಷ್ಟಗಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಹಿರೇಮನ್ನಾಪುರ, ಸುಮಾರು ಎರಡು ದಶಕಗಳ ಬಳಿಕ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಅವಕಾಶ ಪಡೆದಿದೆ.
ಈ ಬಾರಿ ಹಿಂದಿನ ಯಶಸ್ಸನ್ನು ಮೀರಿಸುವ ಸಂಕಲ್ಪದೊಂದಿಗೆ ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಮಿತಿಗಳ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ.ಸಮ್ಮೇಳನದ ಹಿನ್ನೆಲೆಯಲ್ಲಿ ಹಿರೇಮನ್ನಾಪುರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಸ್ವಾಗತ ಕಮಾನುಗಳು ತಲೆ ಎತ್ತಿವೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದು, ವಿದ್ಯುತ್ ದೀಪಾಲಂಕಾರದಿಂದ ಗ್ರಾಮ ರಾತ್ರಿ ವೇಳೆಯಲ್ಲೂ ಮಿಂಚುತ್ತಿದೆ. ಸ್ವಾಗತ ಫಲಕಗಳು, ಸಾಹಿತ್ಯ ಮಹನೀಯರ ಭಾವಚಿತ್ರಗಳು, ಕನ್ನಡ ನುಡಿಮುತ್ತುಗಳು ಗ್ರಾಮಕ್ಕೆ ಹೊಸ ಕಳೆ ತಂದಿವೆ.
ಹಿರೇಮನ್ನಾಪುರದ ಸಾಹಿತ್ಯ ಪ್ರೀತಿ ಮತ್ತು ಗ್ರಾಮಸ್ಥರ ಒಗ್ಗಟ್ಟು ಈ ಸಮ್ಮೇಳನದ ಯಶಸ್ಸಿನ ಹಿಂದಿನ ದೊಡ್ಡ ಶಕ್ತಿಯಾಗಿದೆ. ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು ಭಾಗವಹಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದ್ದಾರೆ.