ಕನ್ನಡ ಭವನ ನಿರ್ಮಾಣ ಜಿಲ್ಲೆಯ ಐತಿಹಾಸಿಕ ಕ್ಷಣ: ಗುರುನಾಥ ಅಕ್ಕಣ್ಣ

KannadaprabhaNewsNetwork | Published : Feb 5, 2024 1:51 AM

ಸಾರಾಂಶ

ಬೀದರ್‌ ಜಿಲ್ಲಾ ಕಸಾಪನಿಂದ ಕನ್ನಡ ಭವನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶನಿವಾರ ನೂತನ ಕನ್ನಡ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಗುರುನಾಥ ಅಕ್ಕಣ್ಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗಿರುವುದು ಐತಿಹಾಸಿಕ ಕ್ಷಣವಾಗಿದೆ. ಕನ್ನಡಕ್ಕಾಗಿ ಜಿಲ್ಲೆಯಲ್ಲಿದ್ದ ದೊಡ್ಡ ಕೊರತೆ ನೀಗಿದೆ ಎಂದು ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ತಿಳಿಸಿದರು.

ಜಿಲ್ಲಾ ಕಸಾಪನಿಂದ ಕನ್ನಡ ಭವನ ಉದ್ಘಾಟನಾ ಸಮಾರಂಭದ ಪ್ರಯುಕ್ತ ನೂತನ ಕನ್ನಡ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವನ ರಚಿಸುವುದು ಸುಲಭವಲ್ಲ. ಕವಿಯ ತಪ್ಪಸ್ಸಿನ ಪರಿಕಲ್ಪನೆಯಲ್ಲಿ ಕವನ ಮೂಡುತ್ತದೆ. ಕವಿಯ ಧ್ಯಾನಸ್ಥ ಸ್ಥಿತಿಯಲ್ಲಿ ಕವನ ಮೂಡುತ್ತದೆ. ಹಾಗಾಗಿ ಹೊಸ ಕವಿಗಳು ಇದರತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬೀದರ್‌ ಜಿಲ್ಲೆಯ ಮೊದಲ ಕವನ ಸಂಕಲನ 1963ರಲ್ಲಿ ಬಂದಿತ್ತು. ಈ ಸುದೀರ್ಘ ಅವಧಿಯಲ್ಲಿ ದಾಖಲಾರ್ಹ ಕಾವ್ಯ ರಚನೆಯಾಗಿಲ್ಲ ಎನ್ನುವುದು ನೋವಿನ ಸಂಗತಿ. ಕವಿಗಳು ಅಧ್ಯಯನಶೀಲರಾಗಿ ಕವಿತೆ ಬರೆಯುತ್ತಿಲ್ಲ. ಕವಿಗಳು ಅಧ್ಯಯನ ಮಾಡಿದಲ್ಲಿ ಕವನಗಳನ್ನು ಬರೆದಲ್ಲಿ ದಾಖಲಾರ್ಹ ಕವನ ಸಂಕಲನಗಳು ಹೊರಬರಲು ಸಾಧ್ಯ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪಾರ್ವತಿ ಸೋನಾರೆ ಮಾತನಾಡಿ, ಕನ್ನಡ ಭವನ ನಿರ್ಮಾಣಕ್ಕೆ ಅನೇಕರ ಶ್ರಮವಿದೆ. ಹೆಣ್ಣು ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದರು.

ರಮೇಶ ಬಿರಾದಾರ ಆಶಯ ನುಡಿಗಳನ್ನಾಡಿ, ಕಾವ್ಯ ಪುರಾತನವಾದುದು, ಕಾವ್ಯ ಜನರ ಧ್ವನಿಯಾಗಿರಬೇಕು. ಈ ದಿಶೆಯಲ್ಲಿ ಕವಿಗಳು ಕವಿತೆ ರಚಿಸಲು ಮುಂದಾಗಬೇಕೆಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಬೀದರ ಬಿದ್ರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ ಸೌದಿ, ಕಸಾಪ ತಾಲೂಕು ಅಧ್ಯಕ್ಷ ಎಮ್.ಎಸ್ ಮನೋಹರ, ಶಾಲೀವಾನ ಉದಗಿರೆ, ಪ್ರಶಾಂತ ಮಠಪತಿ, ನಾಗಭೂಷಣ ಮಾಮಡಿ, ಶಾಂತಲಿಂಗ ಮಠಪತಿ, ನಾಗರಾಜ ಹಾವಣ್ಣಾ, ಡಾ.ಸಿದ್ದಲಿಂಗ ಚಿಂಚೋಳಿ, ರಮೇಶ ಸಲಗರ, ಯುವ ಘಟಕದ ಅದ್ಯಕ್ಷ ಗುರುನಾಥ ರಾಜಗೀರಾ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಕವಿಗಳು ಆಗಮಿಸಿದರು.

ರೂಪಾ ಪಾಟೀಲ ಸ್ವಾಗತಿಸಿದರೆ ಕಸ್ತೂರಿ ಪಟಪಳ್ಳಿ ನಿರೂಪಿಸಿ ಡಾ.ಶ್ರೇಯಾ ಮಹೀಂದ್ರಕರ್ ವಂದಿಸಿದರು.

Share this article