;Resize=(412,232))
ಬೆಂಗಳೂರು : ಅತಿವೇಗವಾಗಿ ಕಾರು ಚಲಾಯಿಸಿ ಬೈಕ್‌ಗೆ ಗುದ್ದಿ ಪರಾರಿಯಾದ ಆರೋಪದ ಮೇರೆಗೆ ಕಿರುತೆರೆ ನಟಿ ದಿವ್ಯಾ ಸುರೇಶ್ ವಿರುದ್ಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಎಂ.ಎಂ.ರಸ್ತೆಯಲ್ಲಿ ದಿವ್ಯಾ ಅವರು ಕಾರಿನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಬೈಕ್‌ನ ಹಿಂಬದಿ ಸವಾರಿ ಮಾಡುತ್ತಿದ್ದ ಅನಿತಾ ಎಂಬವರ ಕಾಲಿಗೆ ಪೆಟ್ಟಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಾಯಾಳು ಮನೆಗೆ ಮರಳಿದ್ದಾರೆ.
ಇನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದಿವ್ಯಾ ಅವರ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ ಅವರು, ನ್ಯಾಯಾಲಯದ ಮೂಲಕ ಪೊಲೀಸರ ವಶದಿಂದ ತಮ್ಮ ಕಾರು ಮರಳಿ ಪಡೆದಿದ್ದಾರೆ. ಪ್ರಕರಣದ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮೂರು ದಿನಗಳ ಬಳಿಕ ಎಫ್‌ಐಆರ್: ಅ.4 ರಂದು ರಾತ್ರಿ 1.30ರ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆ ನಡೆದ 3 ದಿನಗಳ ಬಳಿಕ ಬ್ಯಾಟರಾಯನಪುರ ಸಂಚಾರ ಠಾಣೆಗೆ ತೆರಳಿ ಅನಿತಾ ದೂರು ನೀಡಿದ್ದರು. ಈ ದೂರು ಆಧರಿಸಿ ಅಪರಿಚಿತ ಚಾಲಕ ಎಂದು ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದರು. ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಅಪಘಾತ ಎಸಗಿದ ಕಾರು ಪತ್ತೆ ಹಚ್ಚಿದ್ದರು. ಆಗ ಆ ಕಾರು ನಟಿ ದಿವ್ಯಾ ಸುರೇಶ್ ಅವರದ್ದು ಎಂಬುದು ಗೊತ್ತಾಯಿತು.
ಬ್ಯಾಟರಾಯನಪುರ ಕಡೆಯಿಂದ ತಮ್ಮ ಕಾರು ಚಲಾಯಿಸಿಕೊಂಡು ದಿವ್ಯಾ ತೆರಳುತ್ತಿದ್ದರು. ಆಗ ಎಂ.ಎಂ.ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುವಾಗ ಎದುರಿಗೆ ಬಂದ ಬೈಕ್‌ಗೆ ಕಾರು ಗುದ್ದಿಸಿ ಪರಾರಿಯಾಗಿದ್ದರು.
ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್‌ನಲ್ಲಿ ಬರುತ್ತಿದ್ದ ಅನಿತಾ, ಕಿರಣ್ ಹಾಗೂ ಅನೂಷ ಕೆಳಗೆ ಬಿದ್ದಿದ್ದರು. ಘಟನೆಯಲ್ಲಿ ಅನಿತಾ ಅವರ ಕಾಲಿಗೆ ಬಲವಾದ ಪೆಟ್ಟಾದರೆ, ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದವು. ಕೂಡಲೇ ಅನಿತಾ ಅವರನ್ನು ಕುಟುಂಬ ಸದಸ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಪಡೆದು ಅವರು ಮನೆಗೆ ಮರಳಿದ್ದಾರೆ.
ಬಳಿಕ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು. ಅಲ್ಲದೆ ನ್ಯಾಯಾಲಯದ ಅನುಮತಿ ಪಡೆದು ಜಪ್ತಿಯಾಗಿದ್ದ ಕಾರನ್ನು ಹಿಂಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.