ರಾಜ್ಯದಲ್ಲಿ ಹಿಟ್ಲರ್ ಮಾದರಿ ಸರ್ಕಾರ: ಆರೋಪ

KannadaprabhaNewsNetwork |  
Published : Dec 13, 2024, 12:47 AM IST
ಬೆಳಗಾವಿಯಲ್ಲಿ ಲಿಂಗಾಯತ ಪಂಚಮಶಾಲಿಗಳ ಮೇಲೆ ನಡೆದ ಹಲ್ಲಿಯನ್ನು ಖಂಡಿಸಿ ಕಂಪ್ಲಿಯ ತಹಸೀಲ್ದಾರ್ ಗೆ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು  | Kannada Prabha

ಸಾರಾಂಶ

ಹೋರಾಟಗಾರರ ಜೀವನ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಪ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಹಿಟ್ಲರ್ ಮಾದರಿಯ ಸರ್ಕಾರ ನಡೆಸುತ್ತಿದ್ದಾರೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಎಸ್. ಚಂದ್ರಶೇಖರ ಗೌಡ ಆರೋಪಿಸಿದರು.

ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಹೋರಾಟಗಾರರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿದ ಮಾರಣಾಂತಿಕ ಹಲ್ಲೆ ಖಂಡಿಸಿ ಇಲ್ಲಿನ ಡಾ. ಬಿ. ಆರ್.ಅಂಬೇಡ್ಕರ್ ವೃತ್ತ ದ ಬಳಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಕಂಪ್ಲಿ ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಜ.ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿ ಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ನೂರಕ್ಕೂ ಹೆಚ್ಚು ಹೋರಾಟಗಾರರ ಜೀವನ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟ್ಯಂತರ ಜನರು ದುಃಖವನ್ನು ಅನುಭವಿಸುತ್ತಿದ್ದಾರೆ. ಹೋರಾಟಗಾರರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆಯನ್ನು ಸಮಸ್ತ ಬಳ್ಳಾರಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಅಂದು 12ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಂಚಣ್ಣ ಲಿಂಗಾಯತರ ಮೇಲೆ ಹತ್ಯೆ ಮಾಡಿಸಿದ್ದರು. ಅದೇ ರೀತಿಯಾಗಿ ಇಂದು 21ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗೂಂಡಾಗಿರಿ ಹಾಗೂ ಲಾಠಿ ಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ. ಇಂತಹ ಕ್ರೂರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದರು.

ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಮುಖ್ಯಮಂತ್ರಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿಗಾಗಿ ನಮ್ಮ ಸಮುದಾಯ ಹೋರಾಟ ನಡೆಸುವಾಗ ಬೆಂಬಲಕ್ಕೆ ನಿಂತಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ವಿಜಯಾನಂದ ಕಾಶ್ಯಪ್ಪನವರ್ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಏಕೆ ನಮ್ಮ ಬೆಂಬಲಕ್ಕೆ ನಿಂತಿಲ್ಲ? ಈ ಹೇಯ ಕೃತ್ಯದ ಬಗ್ಗೆ ಏನು ಪ್ರತಿಕ್ರಿಯಿಸಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿಯಾಗಿದೆ ಎಂದರು.

ಪಟ್ಟಣದ ಅತಿಥಿಗೃಹ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವರೆಗೆ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ವಿ.ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಟಿ.ರಾಜಶೇಖರ್ ಗೌಡ, ಉಪಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಅಮರೇಗೌಡ ಮುಖಂಡರಾದ ಅಳ್ಳಳ್ಳಿ ವೀರೇಶ್, ರೇಣುಕಾ ಗೌಡ, ನಾಗರಾಜ್ ಗೌಡ, ಸಿ.ಶರಣನಗೌಡ, ಓಂಕಾರಗೌಡ, ಕೆ.ಬಸವರಾಜ್, ಆನಂದ್ ಮೂರ್ತಿ, ಎಂ.ವೀರೇಶ್, ದೇವಲಾಪುರ ಬಸನಗೌಡ ಗೋಸಿ, ಬೂದಾಳ್ ರವಿ, ಕೆ.ಶಶಿಧರ್, ಎ.ನಾಗರಾಜ ಗೌಡ, ಕೆ.ಕಂತೆಗೌಡ ಸೇರಿ ಅನೇಕರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ