ಕೊಪ್ಪಳ:
ನಗರಸಭೆ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ಅವರ ವರ್ಗಾವಣೆಯಲ್ಲಿ ಹಿಟ್ನಾಳ ಕುಟುಂಬದ ಹಸ್ತಕ್ಷೇಪ ಇಲ್ಲವೇ ಇಲ್ಲ ಎಂದು ಹೇಳಿರುವ ಸಂಸದ ರಾಜಶೇಖರ ಹಿಟ್ನಾಳ, ಆರೋಪವೆಲ್ಲ ರಾಜಕೀಯ ಪ್ರೇರಿತವೆಂದು ಕಿಡಿಕಾರಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಹಾಗೂ ಬಿಜೆಪಿ ರಾಜ್ಯಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಅವರು ಮಾಡಿದ ಆರೋಪ ನಿರಾಧಾರವಾಗಿದೆ ಎಂದರು.
ಲೋಕಾಯಕ್ತ ಸ್ವಾಯತ್ತ ಸಂಸ್ಥೆಯಾಗಿದೆ. ಅದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಅಷ್ಟಕ್ಕೂ ನಾವೇಕೆ ವಸಂತಕುಮಾರ ಅವರನ್ನು ವರ್ಗಾಯಿಸಲು ಪ್ರಯತ್ನಿಸಬೇಕು ಎಂದು ಪ್ರಶ್ನಿಸಿದ ಅವರು, ಪದೇ ಪದೆ ಹಿಟ್ನಾಳ ಕುಟುಂಬದ ಮೇಲೆ ಇವರಿಬ್ಬರು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಪಕ್ಷಗಳು ಅಭಿವೃದ್ಧಿ ಕುರಿತು ಪ್ರಶ್ನಿಸಬೇಕು. ನಾವು ತಪ್ಪು ಮಾಡಿದರೆ ಪ್ರಶ್ನಿಸಲಿ. ಆದರೆ, ಲೋಕಾಯುಕ್ತ ಡಿವೈಎಸ್ಪಿ ವರ್ಗಾವಣೆಯಾದರೆ ನಮ್ಮ ಕುಟುಂಬದ ಮೇಲೆ ಆರೋಪ ಮಾಡುವುದು ಯಾವ ನ್ಯಾಯ ಎಂದ ಅವರು, ಇವರಿಗೆ ಯಾರು ವರ್ಗಾವಣೆ ಮಾಡಿಸುತ್ತಾರೆ ಎನ್ನುವ ಅರಿವು ಸಹ ಇಲ್ಲವೆಂದು ಹೇಳಿದರು.
ರಸ್ತೆ ಹಾಳಾಗಿವೆ ಎಂದರೆ ಒಪ್ಪಿಕೊಳ್ಳಬಹುದು. ಆದರೆ, ಇಂಥ ರಾಜಕೀಯ ಪ್ರೇರಿತ ಆರೋಪ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದ ಅವರು, 2013ರಿಂದ 18ನೇ ಅವಧಿಯಲ್ಲಿ ಕೊಪ್ಪಳದ ಎಲ್ಲ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಬಂದಿರುವ ಅನುದಾನದ ಬಳಕೆಗೆ ರಸ್ತೆ ಇರಲಿಲ್ಲ. ಗ್ರಾಮೀಣ ರಸ್ತೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡಿದ್ದೇವೆ. ಈಗಲೂ ಕೊಪ್ಪಳ ಕ್ಷೇತ್ರಾದ್ಯಂತ ಶೇ.60ರಷ್ಟು ರಸ್ತೆ ಅಭಿವೃದ್ಧಿ ಮಾಡಿದ್ದು ಉಳಿದ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.ಬಿಜೆಪಿ ಅವಧಿಯಲ್ಲಿ ಯಾವ ರಸ್ತೆಯನ್ನೂ ದುರಸ್ತಿ ಹಾಗೂ ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ಬಹುತೇಕ ರಸ್ತೆ ಹಾಳಾಗಿವೆ. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದ ಅವರು, ಜಿಲ್ಲಾದ್ಯಂತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿದ್ದು, ಪ್ರತಿ ಹಳ್ಳಿಗೂ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡಲಾಗುವುದು. ಶೀಘ್ರವೇ ಈ ಯೋಜನೆ ಪೂರ್ಣಗೊಂಡು ಪ್ರತಿ ಮನೆಗೂ ನದಿ ಪೂರೈಕೆಯಾಗಲಿದೆ ಎಂದು ಹಿಟ್ನಾಳ ಹೇಳಿದರು.