ಕೊಪ್ಪಳ:
ವಿಶ್ವವನ್ನು ಸೃಷ್ಟಿಸಿದ್ದು ಈಶ್ವರವಾದರೆ ದೇವಲೋಕದಲ್ಲಿ ಸ್ವರ್ಗ ಸೃಷ್ಟಿಸಿದ್ದು ವಿಶ್ವಕರ್ಮ. ಹಾಗಾಗಿ ಪುರಾಣ ಕಾಲದಿಂದಲು ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಾಣಗಳಲ್ಲಿ ಭಗವಾನ್ ವಿಶ್ವಕರ್ಮನನ್ನು ಸ್ವರ್ಗ ಮತ್ತು ಭೂಮಿ ಸೃಷ್ಟಿಸಿದ ದೈವಿಕ ವಾಸ್ತುಶಿಲ್ಪಿ ಎಂದು ಪೂಜಿಸಲಾಗುತ್ತದೆ. ದೇವರ ಅರಮನೆ, ವಿವಿಧ ದೈವಿಕ ಆಯುಧ ಮತ್ತು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಿದ ಅನೇಕ ಮಹತ್ವದ ವಾಸ್ತುಶಿಲ್ಪದ ಅದ್ಭುತ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ದ್ವಾರಕಾ ಮತ್ತು ಹಸ್ತಿನಾಪುರದ ಪೌರಾಣಿಕ ನಗರಗಳು ಹಾಗೂ ದೇವರ ಪೌರಾಣಿಕ ಹಾರುವ ರಥಗಳು ವಿಶ್ವಕರ್ಮರ ಸೃಷ್ಟಿಗಳಾಗಿವೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ಜಗತ್ತು ಸುಂದರವಾಗಿ ಕಾಣಲು, ನಾವು ಯಾವುದೇ ಕಟ್ಟಡದ ವಾಸ್ತುಶಿಲ್ಪ ನೋಡಿದಾಗ ಅದು ನಮ್ಮ ಕಣ್ಮನ ಸೆಳೆಯುತ್ತದೆ. ಅದಕ್ಕೆ ವಿಶ್ವಕರ್ಮರ ಕೊಡುಗೆಯೇ ಕಾರಣವೆಂದರು.
ಕುಷ್ಟಗಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಟರಾಜ ಸೋನಾರ್, ವಿಶೇಷ ಉಪನ್ಯಾಸ ನೀಡಿದರು. ಕೊಪ್ಪಳದ ಸಿರಸಪ್ಪಯ್ಯನ ಮಠದ ಸಿರಸಪ್ಪಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ವಿಶ್ವಕರ್ಮ ಸಮಾಜದ ಮುಖಂಡರಾದ ನಾಗೇಶ ಕುಮಾರ ಕಂಸಾಳೆ, ದೇವೇಂದ್ರಪ್ಪ ಬಡಿಗೇರ, ಕಾಳಮ್ಮ ಪತ್ತಾರ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.ಮೆರವಣಿಗೆ:
ವಿಶ್ವಕರ್ಮ ಜಯಂತಿ ಅಂಗವಾರ ಅವರ ಭಾವಚಿತ್ರದ ಮೆರವಣಿಗೆಗೆ ಸಂಸದ ರಾಜಶೇಖರ ಹಿಟ್ನಾಳ ಚಾಲನೆ ನೀಡಿದರು. ಮೆರವಣಿಗೆ ಸಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬ ಮಾರ್ಗವಾಗಿ, ಜವಾಹರ್ ರಸ್ತೆ ಮೂಲಕ ಅಶೋಕ ವೃತ್ತದ ವರೆಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಕುಂಭ ಹೊತ್ತು ಸಾಗಿದರು.