ನಾರಾಯಣ ಹೆಗಡೆ
ಹಾವೇರಿ: ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಮುಂಗಾರು ಬೆಳೆ ಬಹುತೇಕ ಹಾನಿಯಾಗಿದ್ದರೂ ಸಮೀಕ್ಷೆಯಲ್ಲಿ ಕೇವಲ 17 ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿದೆ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯನ್ನೇ ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈಗ ಆಕ್ಷೇಪಣೆ ಸಲ್ಲಿಸುವುದೊಂದೇ ರೈತರಿಗೆ ಉಳಿದಿರುವ ಮಾರ್ಗವಾಗಿದೆ.ಜಿಲ್ಲೆಯಲ್ಲಿ ಮೇ ತಿಂಗಳಿಂದ ಆರಂಭವಾದ ಮಳೆ ವಾರದ ಹಿಂದಷ್ಟೇ ವಿರಾಮ ನೀಡಿದೆ. ಅಂದರೆ ಸರಿಸುಮಾರು ನಾಲ್ಕೈದು ತಿಂಗಳ ಕಾಲ ಬಿಡದೇ ಮಳೆಯಾಗಿದೆ. ಪ್ರಮುಖವಾಗಿ ಮೆಕ್ಕೆಜೋಳ, ಸೋಯಾಬಿನ್, ಶೇಂಗಾ, ಹತ್ತಿ ಬೆಳೆ ಮಳೆಗೆ ಸಿಲುಕಿದೆ. ತೇವಾಂಶ ಅಧಿಕಗೊಂಡು ರೋಗ, ಕೀಟಬಾಧೆಯಿಂದಲೂ ಬೆಳೆ ಕೈಗೆ ಸಿಗದಂತಾಗಿದೆ. ಮಾಡಿದ ಖರ್ಚು ಕೂಡ ಸಿಗದ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಚೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಪ್ರದೇಶದ ಬೆಳೆಹಾನಿಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಅದಕ್ಕಾಗಿ ಸಮೀಕ್ಷೆಯನ್ನೂ ನಡೆಸದೇ ಪರಿಹಾರ ನೀಡಬೇಕು ಎಂಬ ಒತ್ತಾಯ ರೈತರದ್ದಾಗಿದೆ. ಆದರೆ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ 16682 ಹೆಕ್ಟೇರ್ ಕೃಷಿ ಬೆಳೆ ಮತ್ತು 340 ಹೆಕ್ಟೇರ್ ತೋಟಗಾರಿಕೆ ಸೇರಿದಂತೆ 17022 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಹಾನಿಯಾಗಿದೆ ಎಂದು ತಿಳಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆಯೊಂದೇ ಮಾರ್ಗ: ಬೆಳೆಹಾನಿ ಕುರಿತಂತೆ ಜಿಲ್ಲಾಧಿಕಾರಿಗಳು ಆಕ್ಷೇಪಣೆಗೆ ಅವಕಾಶ ನೀಡಿದ್ದಾರೆ. ಸಮೀಕ್ಷೆಯ ಕರಡು ಪಟ್ಟಿಯನ್ನು ಗ್ರಾಪಂ, ತಹಸೀಲ್ದಾರ್ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಇದನ್ನು ಪರಿಶೀಲಿಸಿ ಅದರಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ರೈತರು ಸೆ. 24ರೊಳಗಾಗಿ ರೈತ ಸಂಪರ್ಕ ಕೇಂದ್ರ, ಗ್ರಾಪಂ, ಕೃಷಿ, ತೋಟಗಾರಿಕಾ ಕಚೇರಿಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಹೀಗೆ ಆಕ್ಷೇಪಣೆ ಸಲ್ಲಿಸಿದರೆ ಮಾತ್ರ ಬೆಳೆಹಾನಿಯಾದ ಬಗ್ಗೆ ಪರಿಶೀಲಿಸಿ ಸೇರ್ಪಡೆಗೆ ಅವಕಾಶವಿದೆ. ರೈತರಿಗೆ ಈ ಬಗ್ಗೆ ಮಾಹಿತಿ ಗೊತ್ತಾಗದೇ ಆಕ್ಷೇಪಣೆ ಸಲ್ಲಿಸದಿದ್ದರೆ ಬೆಳೆಹಾನಿಯಾದರೂ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಬೆಳೆ ಹಾನಿಯಾದ ರೈತರು ಆಕ್ಷೇಪಣೆ ಸಲ್ಲಿಸುವುದು ಅಗತ್ಯವಾಗಿದೆ.ಹಸಿ ಬರಗಾಲ ಘೋಷಿಸಿ
ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಕೃಷಿ, ತೋಟಗಾರಿಕೆ ಸೇರಿ ಒಟ್ಟು 17 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದರೆ ಜಿಲ್ಲಾಡಳಿತ ಆಕ್ಷೇಪಣೆ ಕರೆಯದೇ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆ ಎಂದು ಘೋಷಿಸಿಬೇಕೆಂದು ರೈತ ಸಂಘ ಹಾಗೂ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆಗೆ ಸಿಲುಕಿ ಬೆಳೆಗಳು ಹಾನಿಯಾಗಿವೆ.17 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಕಾರಿಗಳು ತಿಳಿಸಿದ್ದಾರೆ. ಸಮೀಕ್ಷೆಯನ್ನು ಅಧಿಕಾರಿಗಳು ಸರಿಯಾಗಿ ಮಾಡಿಲ್ಲ. ಮಳೆ ಬಿಡುವೇ ನೀಡಿಲ್ಲ. ಈಗ ಬಿಡುವು ನೀಡಿ ನಾಲ್ಕು ದಿನವಾಯಿತು. ಬೆಳೆಗಳು ಸಂಪೂರ್ಣ ಹಾಳಾಗಿವೆ. ಹೊಲದಲ್ಲಿ ಹುಲ್ಲು ಮಾತ್ರ ಬೆಳೆದಿವೆಯೇ ಹೊರತು ಬೆಳೆಗಳಿಲ್ಲ. ಇಳುವರಿಯಲ್ಲಿ ಕುಂಠಿತವಾಗಿವೆ. ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ಆದ್ದರಿಂದ ಸರ್ಕಾರ ಜಿಲ್ಲೆಯನ್ನು ಹಸಿ ಬರಗಾಲವೆಂದು ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜಂಟಿ ಸಮೀಕ್ಷೆ: ಬೆಳೆಹಾನಿ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್, ಕೃಷಿ, ತೋಟಗಾರಿಕಾ ಕಚೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ. 24ರೊಳಗಾಗಿ ಸಲ್ಲಿಸಬೇಕು. ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಿ, ಯಾದಿಯನ್ನು ಅಂತಿಮಗೊಳಿಸಲಾಗುವುದು. ನಿಗದಿ ಪಡಿಸಿದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ ತಿಳಿಸಿದರು.ಬೆಳೆಹಾನಿ: ಜಿಲ್ಲೆಯಲ್ಲಿ ಕೇವಲ 17 ಸಾವಿರ ಹೆಕ್ಚೇರ್ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವಾಸ್ತವವಾಗಿ ಸಂಪೂರ್ಣ ಬೆಳೆಹಾನಿಯಾಗಿದೆ. ಈಗಲೂ ಕಾಲ ಮಿಂಚಿಲ್ಲ. ರೈತರು ಸಂಬಂಧಪಟ್ಟ ಕಚೇರಿಗಳಿಗೆ ತೆರಳಿ ಆಕ್ಷೇಪಣೆ ಅರ್ಜಿ ಸಲ್ಲಿಸಬೇಕು. ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.