ಉಡುಪಿ: ಯುವಜನರು ಎಚ್‌ಐವಿ ಸೋಂಕು ಹರಡುವ ವಿಧಾನ, ಅದರ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ಹೊಂದಿರಬೇಕು. ಉಡುಪಿ ಜಿಲ್ಲೆಯಲ್ಲಿ ಸುಮಾರು 4,700 ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದು, ಚಿಕಿತ್ಸೆ ಹಾಗೂ ಆರೈಕೆ ಸೇವೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್. ವಿ. ಹೇಳಿದರು. ಉಡುಪಿ ಜಿಲ್ಲಾಡಳಿತ ವತಿಯಿಂದ ನಗರದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್‌ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್‌ಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‌ಐವಿ/ಏಡ್ಸ್ ಅರಿವಿನ ಮಾಸಾಚರಣೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್., ಕಾಲೇಜಿನ ಯುವ ರೆಡ್‌ಕ್ರಾಸ್ ಸಂಯೋಜಕಿ ಕವಿತಾ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಸಫಿಯಾ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಕೆ. ಉಪಸ್ಥಿತರಿದ್ದರು. ರೀಲ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮಹಾಬಲೇಶ್ವರ ನಿರೂಪಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ರಾಕೇಶ್ ವಂದಿಸಿದರು.