ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಮಾಗಳ-ಗದಗ ಜಿಲ್ಲೆಯ ಕಲ್ಲಾಗನೂರು ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣದ ಸ್ಥಳ ಬದಲಿಸುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿರುವುದು ಈ ಭಾಗದ ಜನರಲ್ಲಿ ಆಕ್ರೋಶ ಹೆಚ್ಚಿದೆ.ಶಿರಹಟ್ಟಿ, ಲಕ್ಷ್ಮೇಶ್ವರ ಭಾಗದಲ್ಲಿ ಸೇತುವೆ ಹೋರಾಟ ಸಮಿತಿ 1988ರಿಂದ ಒತ್ತಾಯಿಸುತ್ತ ಬಂದಿದೆ. ಶಿರಹಟ್ಟಿ ಕ್ಷೇತ್ರದಿಂದ 1978ರಲ್ಲಿ ಕಾಂಗ್ರೆಸ್‌ನಿಂದ ಮತ್ತು 1983ರಲ್ಲಿ ಪಕ್ಷೇತರಾಗಿ ಚಕ್ಕಡಿ ಚಿಹ್ನೆಯಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೂಳಪ್ಪ ಫ. ಉಪನಾಳ ಅವರು, ಕಲ್ಲಾಗನೂರು- ಮಾಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕೆಂದು ಕನಸು ಹೊಂದಿದ್ದರು. ಆ ಸಂದರ್ಭದಲ್ಲಿ ಅದಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಆಗ ಕಾಮಗಾರಿಗೆ ಅನುದಾನ ಇಲ್ಲದ ಕಾರಣ ನನೆಗುದಿಗೆ ಬಿದ್ದಿತ್ತು.
ಮೂರು ದಶಕಗಳ ಹೋರಾಟದ ಫಲವಾಗಿ ನೀರಾವರಿ ನಿಗಮದಿಂದ ಇದೀಗ ₹40 ಲಕ್ಷಗಳಲ್ಲಿ ಡಿಪಿಆರ್ ಮತ್ತು ಕನ್ಸಲ್ಟನ್ಸಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಚಿವ ಎಚ್.ಕೆ. ಪಾಟೀಲ ಅವರು ನೀರಾವರಿ ನಿಗಮಕ್ಕೆ ಪತ್ರ ಬರೆದು, ಶಿರಹಟ್ಟಿ ತಾಲೂಕಿನ ಸಾಸಲವಾಡ, ಹೊಳೆಇಟಗಿ ಬಳಿ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಸಚಿವರು ಈ ರೀತಿಯ ಪತ್ರ ಬರೆದಿರುವ ಹಿನ್ನೆಲೆ ಸಚಿವರ ವಿರುದ್ಧ ಸಿಡಿದೆದ್ದಿರುವ ಕಲ್ಲಾಗನೂರು, ಮಾಗಳ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ರೈತರ ಅಳಲು: ಸಿಂಗಟಾಲೂರು ಏತ ನೀರಾವರಿ ಅಚ್ಚುಕಟ್ಟು ಪ್ರದೇಶವಾಗಿರುವ ಹಿನ್ನೆಲೆ ವಾಣಿಜ್ಯ ಬೆಳೆಗಳಾದ ಕಬ್ಬು, ಬತ್ತ ಬೆಳೆಯುತ್ತಾರೆ. ಅವುಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸೇತುವೆ ಇಲ್ಲದ ಕಾರಣ ರೈತರು-ವ್ಯಾಪಾರಸ್ಥರು ಸುತ್ತುಬಳಸಿ ಹೋಗಬೇಕು.70 ಕಿಮೀ ದೂರದ ಮೈಲಾರ ಸಕ್ಕರೆ ಕಾರ್ಖಾನೆ ಹಾಗೂ ಬತ್ತ ಖರೀದಿ ಕೇಂದ್ರ ದಾವಣಗೆರೆಗೆ 150 ಕಿಮೀ ದೂರ ಕ್ರಮಿಸಬೇಕು. ರಾಣಿಬೆನ್ನೂರು ಇಲ್ಲವೇ ಕೂರ್ಲಹಳ್ಳಿ ಸೇತುವೆ ಮೂಲಕ ತೆರಳಬೇಕು.
ಮಾಗಳ- ಕಲ್ಲಾಗನೂರು ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದಿಂದ ಮೈಲಾರ ಸಕ್ಕರೆ ಕಾರ್ಖಾನೆ ಕೇವಲ 8 ಕಿಮೀ ದೂರ, ಅತ್ತ ದಾವಣಗೆರೆ 70 ಕಿಮೀ ದೂರ ಮತ್ತು ಹೂವಿನಹಡಗಲಿ ತಾಲೂಕು 10 ಕಿಮೀ ಅಂತರವಾಗುತ್ತದೆ. ಆದ್ದರಿಂದ ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರು ಬೆಂಗಳೂರು ತಲುಪಲು 70 ಕಿಮೀ ಅಂತರ ಕಡಿಮೆಯಾಗುವ ಜತೆಗೆ 1 ತಾಸು ಸಮಯ ಉಳಿತಾಯವಾಗಲಿದೆ.ಹೂವಿನಹಡಗಲಿ, ಶಿರಹಟ್ಟಿ, ಲಕ್ಷ್ಮೇಶ್ವರ ಭಾಗದ ಜನತೆಗೆ ಹೆಚ್ಚು ಅನುಕೂಲವಾಗುತ್ತಿರುವ ಜತೆಗೆ ತಂಗೋಡ ಹತ್ತಿರ ಹಾಯ್ದು ಹೋಗಿರುವ ಬಾಗಲಕೋಟೆ- ಬಿಳಿಗಿರಿ ರಂಗನತಿಟ್ಟು ರಾಜ್ಯ ಹೆದ್ದಾರಿಯನ್ನು ಗಜೇಂದ್ರಗಡ- ಸೊರಬ ರಸ್ತೆಯ ಮೂಲಕ 10 ಕಿಮೀನಲ್ಲೆ ತಲುಪುತ್ತದೆ. 54 ಚಳ್ಳಕೆರೆ- ಅರಬಾವಿ ರಾಜ್ಯ ಹೆದ್ದಾರಿ ಹೂವಿನಹಡಗಲಿಯಲ್ಲಿ ಹಾಯ್ದು ಹೋಗಿರುವ ಹಿನ್ನೆಲೆ 12 ಕಿಮೀ ದೂರದಲ್ಲಿ ಸಂಪರ್ಕ ಕಲ್ಪಿಸಲಿದೆ. ಆದ್ದರಿಂದ ಮಾಗಳ- ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕು. ಒಂದು ವೇಳೆ ಸ್ಥಳಾಂತರವಾದಲ್ಲಿ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಮಾಗಳ, ಕಲ್ಲಾಗನೂರು ಸೇರಿದಂತೆ ಹತ್ತಾರು ಹಳ್ಳಿಯ ಜನ ಎಚ್ಚರಿಕೆ ನೀಡಿದ್ದಾರೆ.
ಹೋರಾಟಕ್ಕೆ ಅಣಿ: ಈಗಾಗಲೇ ಹಡಗಲಿ ಕ್ಷೇತ್ರದ ಕೃಷ್ಣನಾಯ್ಕ, ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಪತ್ರ ಬರೆದು ಮಾಗಳ- ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಜ. 3ರಂದು ಮಾಗಳ ಗ್ರಾಮದ ತುಂಗಭದ್ರಾ ನದಿ ಬಳಿ ಹೂವಿನಹಡಗಲಿ, ಶಿರಹಟ್ಟಿ ಕ್ಷೇತ್ರದ ಇಬ್ಬರು ಶಾಸಕರು ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಲಿದ್ದು, ಸಚಿವ ಎಚ್.ಕೆ.ಪಾಟೀಲ್ ವಿರುದ್ಧ ರೈತರು ದೊಡ್ಡಮಟ್ಟದ ಹೋರಾಟಕ್ಕೆ ಅಣಿಯಾಗುವ ಸಾಧ್ಯತೆ ಇದೆ.
ಸ್ಥಳಾಂತರ ಮಾಡಲು ಬಿಡಲ್ಲ: ಮಾಗಳ- ಕಲ್ಲಾಗನೂರು ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಸ್ಥಳಾಂತರ ಮಾಡಿದರೆ ಈ ಕುರಿತು ನಮ್ಮ ಕ್ಷೇತ್ರದ ಜನರೊಂದಿಗೆ ಹೋರಾಟಕ್ಕೆ ಇಳಿಯುತ್ತೇನೆ. ಈಗಾಗಲೇ ಶಿರಹಟ್ಟಿ ಹಾಗೂ ಹೂವಿನಹಡಗಲಿ ಇಬ್ಬರೂ ಶಾಸಕರ ಒಪ್ಪಿಗೆ ಇದೆ. ಈ ಕುರಿತು ಸಚಿವರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಲು ಬಿಡುವುದಿಲ್ಲ ಶಾಸಕ ಕೃಷ್ಣನಾಯ್ಕ.