ವೈದ್ಯನಾಥಪುರ ನಾಲಾ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

KannadaprabhaNewsNetwork |  
Published : Apr 05, 2026, 01:30 AM IST
4ಕೆಎಂಎನ್ ಡಿ11 | Kannada Prabha

ಸಾರಾಂಶ

ನಾಲಾ ಕಾಮಗಾರಿಯಿಂದಾಗಿ ಈ ಭಾಗದ ರೈತರ ಬಹುದಿನದ ಬೇಡಿಕೆ ಈಡೇರಿದೆ. ಈ ಕಾಮಗಾರಿಯಿಂದ 6 ಕಿ.ಮೀ. ಉದ್ದದ 400 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ 2.5 ಕಿ.ಮೀ. ಉದ್ದದವರೆಗೆ ಕವರ್‌ಡಕ್‌ನೊಂದಿಗೆ ರಸ್ತೆ ಆಧುನಿಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕಳೆದ ಹಲವು ವರ್ಷಗಳಿಂದಲೂ ನೆನಗುದಿಗೆ ಬಿದ್ದಿದ್ದ ವೈದ್ಯನಾಥಪುರ ನಾಲಾ ಅಭಿವೃದ್ಧಿ ಕಾಮಗಾರಿಯಿಂದ ಕೊನೇ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಹರಿದು ಬೇಸಾಯ ಮಾಡಲು ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕು ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಡಿ 49.5 ಕೋಟಿ ರು. ವೆಚ್ಚದ ವೈದ್ಯನಾಥಪುರ ನಾಲಾ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಾಲಾ ಕಾಮಗಾರಿಯಿಂದಾಗಿ ಈ ಭಾಗದ ರೈತರ ಬಹುದಿನದ ಬೇಡಿಕೆ ಈಡೇರಿದೆ ಎಂದರು.

ಈ ಕಾಮಗಾರಿಯಿಂದ 6 ಕಿ.ಮೀ. ಉದ್ದದ 400 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ 2.5 ಕಿ.ಮೀ. ಉದ್ದದವರೆಗೆ ಕವರ್‌ಡಕ್‌ನೊಂದಿಗೆ ರಸ್ತೆ ಆಧುನಿಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಮದ್ದೂರು ನಗರಸಭೆಯ ಪಟ್ಟಣ ವ್ಯಾಪ್ತಿ ಹಾದುಹೋಗಿರುವ ಪ್ರಮುಖ ಮೂರು ನಾಲೆಗಳ ವ್ಯಾಪ್ತಿಯ ಜನರ ಮತ್ತು ರೈತರ ಹಿತದೃಷ್ಟಿಯಿಂದ ಸ್ವಚ್ಛತೆ, ನಾಲಾ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.

90 ಕೋಟಿ ರು. ವೆಚ್ಚದಲ್ಲಿ ಕಳೆದ ವರ್ಷ ಆರಂಭವಾದ ಕೆಮ್ಮಣ್ಣುನಾಲಾ ಆಧುನೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ನಾಲಾ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಮುಗಿದು ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.

21 ಕೋಟಿ ರು. ಮೊತ್ತದ ವೈದ್ಯನಾಥ ನಾಲಾ ಅಭಿವೃದ್ಧಿಗೆ ಅಧಿಕೃತವಾಗಿ ಚಾಲನೆ ನೀಡಿದ್ದು, 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದ ಎರಡು ನಾಲೆಗಳಾದ ಭೈರನ್ ನಾಲೆಗೆ 18 ಕೋಟಿ ರು. ಮತ್ತು ಚಾಮನಹಳ್ಳಿ ನಾಲೆಗೆ 10 ಕೋಟಿ ರು. ಹಣ ಮೀಸಲಿರಿಸಲಾಗಿದೆ. ಮುಂದಿನ ವಾರದಲ್ಲಿ ಈ ಎರಡು ನಾಲೆಗಳ ಆಧುನೀಕರಣಕ್ಕೆ ಭೂಮಿ ಪೂಜೆ ನೆರವೇರಿಸುವುದಾಗಿ ತಿಳಿಸಿದರು.

ಸದರಿ ಕಾಮಗಾರಿಯಲ್ಲಿ ನಾಲಾ ಆಧುನೀಕರಣ, ಕವರ್‌ಡಕ್ ನಿರ್ಮಾಣ, ಸಿಸಿ ರಸ್ತೆ, ತೂಬು ಮತ್ತು ಸೇತುವೆಗಳು ನಿರ್ಮಾಣವಾಗಲಿದೆ. ನಾಲ್ಕು ಕಾಲುವೆಗಳಿಗೂ ನೀರೊದಗಿಸುವ ಮದ್ದೂರು ಕೆರೆ ನೀರಿನ ಸಂಗ್ರಹ ಹೆಚ್ಚಿಸುವ ದೃಷ್ಟಿಯಿಂದ ಕೆರೆ ಆಧುನೀಕರಣಕ್ಕೆ150 ಎಕರೆಗೂ ಹೆಚ್ಚು ಪ್ರದೇಶದ ಒತ್ತುವರಿ ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ ಎಂದರು.

ಈ ವೇಳೆ ನೀರಾವರಿ ಸಲಹಾ ಸಮಿತಿ ಸದಸ್ಯ ಆರ್.ಮೋಹನ್‌ಕುಮಾರ್, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಹಿರಿಯ ಮುಖಂಡ ಅಜ್ಜಹಳ್ಳಿ ರಾಮಕೃಷ್ಣ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯೆ ಬಿ.ಸಿ.ಸರ್ವಮಂಗಳ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇಗೌಡ, ಗ್ರಾಪಂ ಮಾಜಿ ಸದಸ್ಯ ವಿ.ಟಿ.ಶಿವರಾಜು, ಮುಖಂಡರಾದ ವಿ.ಟಿ.ನಾರಾಯಣ, ಗೋವಿಂದು, ಜಯ್‌ಕುಮಾರ್, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಎ.ಇ.ಇ ನಾಗರಾಜು, ಸ್ಥಳೀಯ ರೈತಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ ಹಾಕಲು ತವರಿಗೆ ವಲಸೆ ಕಾರ್ಮಿಕರು
ಬೇಲೂರಲ್ಲಿ ಹನ್ನೆರಡನೇ ದಿನದ ಸಿಂಹಾರೋಹಣೋತ್ಸವ