ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ಮತ್ತೆ ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಳೆ ಇಲ್ಲದೆ ಬಣಗುಡುತ್ತಿದ್ದ ಕಾವೇರಿ ನದಿಗೆ ಕಬಿನಿ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿದ್ದಂತೆ ಜಲಪಾತವು ರುದ್ರ ರಮಣೀಯವಾಗಿ ಹರಿಯತೊಡಗಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ಮತ್ತೆ ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಳೆ ಇಲ್ಲದೆ ಬಣಗುಡುತ್ತಿದ್ದ ಕಾವೇರಿ ನದಿಗೆ ಕಬಿನಿ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿದ್ದಂತೆ ಜಲಪಾತವು ರುದ್ರ ರಮಣೀಯವಾಗಿ ಹರಿಯತೊಡಗಿದೆ.ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ನದಿಯ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಜಲಪಾತವು ಬತ್ತಿ ಹೋಗುವ ಹಂತಕ್ಕೆ ತಲುಪಿದ್ದು, ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಕಬಿನಿ ಜಲಾಶಯದಿಂದ 25,000 ಕ್ಯುಸೆಕ್ ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು.ಬಂಡೆಗಳ ಮೇಲೆ ಅಪ್ಪಳಿಸುವ ನೀರಿನ ಗರ್ಜನೆ, ಎದ್ದು ಬೀಳುವ ನೀರಿನ ಸಿಂಚನ ಮತ್ತು ಸುತ್ತಲೂ ಹರಡುವ ಮಂಜು ಪ್ರವಾಸಿಗರ ಕಣ್ಮನ ತಣಿಸುತ್ತಿದೆ. ಕರ್ನಾಟಕದ ನಯಾಗರ ಎಂದು ಕರೆಯಲ್ಪಡುವ ಈ ಜಲಪಾತವು ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡು ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಜಲಪಾತದಲ್ಲಿ ಕಾವೇರಿ ನೀರು ರುದ್ರರಮಣೀಯವಾಗಿ ಹರಿಯುತ್ತಿದೆ.ನೀರು ಬಿಡುಗಡೆಯ ಸುದ್ದಿ ತಿಳಿಯುತ್ತಿದ್ದಂತೆ ದೂರದೂರುಗಳಿಂದ ಪ್ರವಾಸಿಗರು ಹೊಗೇನಕಲ್ ಕಡೆಗೆ ಆಗಮಿಸುತ್ತಿದ್ದಾರೆ. ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ತೆಗೆಯುವುದು ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯ ಬೋಟು ಚಾಲಕರು, ಮಾರಾಟಗಾರರ ಮುಖದಲ್ಲೂ ಸಂತಸ ಮೂಡಿದೆ.ಆಡಳಿತ ವರ್ಗವು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಜಲಪಾತದ ಸಮೀಪಕ್ಕೆ ಹೋಗದಂತೆ ಮತ್ತು ದೋಣಿ ವಿಹಾರದ ವೇಳೆ ರಕ್ಷಣಾ ಸಾಧನಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ.ಕಬಿನಿ ಜಲಾಶಯದಿಂದ ನೀರು ಬಿಡುಗಡೆಯಾಗಿರುವುದು ಹೊಗೆನಕಲ್ ಜಲಪಾತಕ್ಕೆ ಮಾತ್ರವಲ್ಲದೆ ಕಾವೇರಿ ನದಿ ಪಾತ್ರದ ರೈತರಿಗೂ ಅನುಕೂಲವಾಗಿದೆ. ಪ್ರವಾಸೋದ್ಯಮದ ಜೊತೆಗೆ ಸ್ಥಳೀಯ ಆರ್ಥಿಕತೆಗೂ ಚೈತನ್ಯ ಬಂದಿದೆ.
--
4ಸಿಎಚ್ಎನ್17ಕಬಿನಿ ನದಿಯಿಂದ ನೀರು ಬಿಟ್ಟಿರುವುದರಿಂದ ನೀರಿನ ರಭಸಕ್ಕೆ ಹೊಗೇನಕಲ್ ಜಲಪಾತ ಮೈದುಂಬಿಕೊಂಡು ತಮಿಳುನಾಡಿಗೆ ನೀರು ಹರಿಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.