ಸಮರ್ಪಕ ವಿದ್ಯುತ್‌ ಸರಬರಾಜು, ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು. ಬರ ಪರಿಹಾರ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಗ್ರಾಮೀಣ ಮೋರ್ಚಾದಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಸಮರ್ಪಕ ವಿದ್ಯುತ್‌ ಸರಬರಾಜು, ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು. ಬರ ಪರಿಹಾರ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಗ್ರಾಮೀಣ ಮೋರ್ಚಾದಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜೆಸ್ಕಾಂ ಕಚೇರಿವರೆಗೂ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ ಮುಖಾಂತರ ಮೆರವಣಿಗೆ ನಡೆಸಿದರು. ಇದೇ ವೇಳೆ ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆ ನಡೆಸಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪ್ರತಿಭಟನೆ ಸಮಯದಲ್ಲಿ ಒಣಗಿದ ಬೆಳೆಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಉದ್ದೇಶಿಸಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಬೋರ್‌ವೆಲ್‌ ಆಧಾರಿತ ಬೆಳೆಗಳು ಹಾನಿಗೀಡಾಗುತ್ತಿವೆ. ಇಡೀ ರಾಜ್ಯಕ್ಕೆ ಅರ್ಧದಷ್ಟು ಕರೆಂಟ್‌ ಉತ್ಪಾದಿಸಿ ಕೊಡುವ ಆರ್‌ಟಿಪಿಎಸ್‌ ಹಾಗೂ ವೈಟಿಪಿಎಸ್‌ ಸ್ಥಾವರಗಳನ್ನು ಹೊಂದಿದ ರಾಯಚೂರು ತಾಲೂಕಿನಲ್ಲಿ ಕರೆಂಟ್‌ ಕಣ್ಣಾ ಮುಚ್ಚಾಲೆಯಾಗುತ್ತಿದ್ದರೂ, ಆಡಳಿತ ವರ್ಗವು ಮೌನಕ್ಕೆ ಶರಣಾಗಿದೆ. ತೀವ್ರ ಮಳೆಯ ಕೊರತೆಯಿಂದಾಗಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಠಿಯಾಗಿದ್ದು, ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರು ಸಹ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ, ಇಂತಹ ದುಸ್ಥಿತಿಗೆ ಜಿಲ್ಲೆ ಶಾಸಕರು ಹಾಗೂ ಜಿಲ್ಲಾಡಳಿತವೇ ನೇರ ಕಾರಣೀಭೂತರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಬರ ಸನ್ನಿವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು.ನಂತೆ ಬರ ಪರಿಹಾರ ನೀಡಬೇಕು, ಇಷ್ಟೇ ಅಲ್ಲದೇ ಕೂಡಲೇ ರೈತರ ಪಂಪ್ಸೆಟ್‌ಗಳಿಗೆ 12 ತಾಸು ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು, ಬೇಡಿಕೆಗಳ ಈಡೇರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದ್ದಲ್ಲಿ ಹೋರಾಟವನ್ನು ತೀವ್ರಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎನ್‌.ಶಂಕ್ರಪ್ಪ, ರವೀಂದ್ರ ಜಲ್ದಾರ್, ಎನ್‌.ಕೇಶವರೆಡ್ಡಿ, ಮಹಾಂತೇಶ ಮುಕ್ತಿ, ಸಿದ್ದನಗೌಡ ನೆಲಹಾಳ ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.