ಇಂದಿನ ಮಕ್ಕಳಲ್ಲಿ ಮೊಬೈಲ್ ಹಾವಳಿಯಿಂದ ಮಾನಸಿಕವಾಗಿ ಬೆಳವಣಿಗೆ ಕುಂಠಿತವಾಗುತ್ತಿದೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮನೋವಿಕಾಸಕ್ಕೆ ಸ್ಪರ್ಧೆಗಳು ಅವಶ್ಯಕ ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಭೀಮಸೇನ್ ಆಚಾರ್ಯ ನವಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಇಂದಿನ ಮಕ್ಕಳಲ್ಲಿ ಮೊಬೈಲ್ ಹಾವಳಿಯಿಂದ ಮಾನಸಿಕವಾಗಿ ಬೆಳವಣಿಗೆ ಕುಂಠಿತವಾಗುತ್ತಿದೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮನೋವಿಕಾಸಕ್ಕೆ ಸ್ಪರ್ಧೆಗಳು ಅವಶ್ಯಕ ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಭೀಮಸೇನ್ ಆಚಾರ್ಯ ನವಲಿ ಹೇಳಿದರು.ನಗರದ ಉಪ್ಪಾರವಾಡಿ ಗಣೇಶೋತ್ಸವದಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಇಂದಿನ ಮಕ್ಕಳಲ್ಲಿ ಸಂಸ್ಕಾರಯುತವಾದ ಶಿಕ್ಷಣ ನೀಡಬೇಕು. ಈ ಕೆಲಸವನ್ನು ವಸಿಷ್ಠಧಾಮ ನಿರಂತರವಾಗಿ ಮಾಡುತ್ತಾ ಬಂದಿದೆ. ಮಕ್ಕಳು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪಾಲಕರು ಪ್ರೇರೇಪಿಸಬೇಕು. ಆಗ ಅವರಲ್ಲಿ ಅಡಗಿರುವ ಶಕ್ತಿ ಬೆಳಕಿಗೆ ಬರುತ್ತದೆ ಎಂದು ಹೇಳಿದರು.
ನಗರಸಭೆಯ ಸದಸ್ಯ ಹನುಮೇಶ ಕುರಕುಂದಿ,ನಿವೃತ್ತ ಮುಖ್ಯಗುರು ಪಾಂಡುರಂಗ ದೇಸಾಯಿ, ಉಪನ್ಯಾಸಕಿ ಸಂತೋಷಿ ಕುಮಾರಿ ಹಾಗೂ ಶಿಕ್ಷಕಿ ಸಾವಿತ್ರಿ ದೀಕ್ಷಿತ್ ಚಲನಚಿತ್ರ ಗೀತೆಗಳಲ್ಲಿ ಆಧ್ಯಾತ್ಮ ಚಿಂತನೆಯ ಕುರಿತು ಮಾತನಾಡಿದರು.ಸಾನ್ವಿ, ರಿತಿಕಾ, ಪ್ರೇರಣಾ ಕಲ್ಲೂರು, ಸಮರ್ಥ ಕೆಸರಟ್ಟಿ, ಆರಾಧ್ಯ ದೇಸಾಯಿ, ನೇತ್ರಾವತಿ ದೇವರಗುಡಿ ಸನ್ನಿಧಿ ಹೊಗಿಬಂಡಿ, ಅನನ್ಯ ದೇಸಾಯಿ ಸೇರಿದಂತೆ 60ಕ್ಕೂ ಹೆಚ್ಚು ಮಕ್ಕಳು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಲಕ್ಷ್ಮೀ ನಾರಾಯಣ, ದುರ್ಗಾ, ಸಾಯಿಬಾಬಾ, ರಾಧೆ ಕೃಷ್ಣ, ಶ್ರೀರಾಮ, ರಾಘವೇಂದ್ರ ಸ್ವಾಮಿ, ಪಾರ್ವತಿ ಪರಮೇಶ್ವರ, ಗಣೇಶನ ವೇಷಭೂಷಣ ತೊಟ್ಟು ಚಿಕ್ಕಮಕ್ಕಳು ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿ ಉಪ್ಪಾರವಾಡಿ, ವಶಿಷ್ಠಧಾಮ ಹಾಗೂ ಭಜನಾ ಮಂಡಳಿಗಳಿಂದ ಇತ್ತೀಚೆಗೆ ನಿಧನರಾದ ಟಿ.ಟಿ.ಡಿ. ದಾಸಸಾಹಿತ್ಯ ಪ್ರಾಜೆಕ್ಟ್‌ನ ಸಂಸ್ಥಾಪಕ ಅಪ್ಪಣ್ಣಾಚಾರ್ಯ ಕೌತಾಳಂ ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಪುಷ್ಪನಮನ ಸಲ್ಲಿಸಲಾಯಿತು.ಯುವಕ ಮಂಡಳಿಯ ಅಧ್ಯಕ್ಷ ದೇವರಾಜ ಸಸಳ್ಳಿ, ಗೌರವಾಧ್ಯಕ್ಷ ಮಾರುತಿ ದಾಸರ, ಚಿದಾನಂದಪ್ಪ ಕಟ್ಟಿಮನಿ, ಬಳ್ಳಾರಿ ವೆಂಕಟೇಶ, ಬಸವರಾಜ.ಕೆ, ವಶಿಷ್ಠಧಾಮ ಮಹಿಳಾ ಮಂಡಳಿಯ ಅಧ್ಯಕ್ಷೆ ಶೋಭಾ ನವಲಿ ಹಾಗೂ ಭಜನಾ ಮಂಡಳಿಯ ಅಧ್ಯಕ್ಷೆ ಈರಮ್ಮ ವೆಂಕಟೇಶಪ್ಪ ಉಪಸ್ಥಿತರಿದ್ದರು. ತಿಮ್ಮಣ್ಣ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.