ಕುಕನೂರು: ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಮನಸ್ಸು ಮಾಡಿದರೆ ಹೊಗೇನಕಲ್ ಮತ್ತು ಮೇಕೆದಾಟುನಿಂದ ೧೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಕರ್ನಾಟಕ-ತಮಿಳುನಾಡಿನಿಂದ ಹೊಗೇನಕಲ್ ಫಾಲ್ಸ್ ಮತ್ತು ಮೇಕೆದಾಟು ಈ ಎರಡೂ ಯೋಜನೆ ಕುರಿತು ವಿವಾದ ನಡೆಯುತ್ತಿದೆ. ಎರಡು ರಾಜ್ಯಗಳೂ ರಾಜಿ ಮಾಡಿಕೊಂಡರೆ ಕರ್ನಾಟಕ ಮತ್ತು ತಮಿಳುನಾಡು ತಲಾ ೫೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ನಮ್ಮ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ೫ನೇ ಸ್ಥಾನದಲ್ಲಿದೆ. ದೇಶದಲ್ಲಿ ಸೋಲಾರ್, ವಿಂಡ್‌ಫ್ಯಾನ್, ಜಲವಿದ್ಯುತ್ ಶಕ್ತಿ, ಕಲ್ಲಿದ್ದಲು ವಿದ್ಯುತ್ ಶಕ್ತಿ ಸೇರಿದಂತೆ ಎಲ್ಲ ವಲಯಗಳಿಂದ ವಿದ್ಯುತ್ ಸರಬರಾಜು ಆಗುತ್ತಿದ್ದರೆ ರಾಜ್ಯದ ಎಲ್ಲ ಮನೆಗೆ ವಿದ್ಯುತ್‌ನ್ನು ಉಚಿತವಾಗಿ ಪೂರೈಸಬಹುದು ಎಂದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗೆ ವಾರ್ಷಿಕವಾಗಿ ₹೫೨ ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯಿಂದ ೧.೬೯ ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ೩೬ ಲಕ್ಷ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದಕ್ಕೆ ₹೨೧ ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತಿದೆ ಎಂದರು.ಜನರ ಕೆಲಸಕ್ಕೆ ಬೈಯಿಸಿಕೊಳ್ತೇನೆ: ತಾಲೂಕು ಕೇಂದ್ರವಾದ ಮೇಲೆ ಸಾರ್ವಜನಿಕರ ಅನುಕೂಲಕ್ಕಾಗಿ ನಾನಾ ಇಲಾಖೆಯ ಕಚೇರಿ ಆರಂಭಿಸಬೇಕಾಗಿದೆ. ಆದರೆ ಜನರು ಅದಕ್ಕೆ ಸಹಕಾರ ನೀಡುತ್ತಿಲ್ಲ. ರುದ್ರಮುನೀಶ್ವರ ದೇವಸ್ಥಾನ ಜಾಗದಲ್ಲಿ ಕೋರ್ಟ್, ತಹಸೀಲ್ದಾರ್ ಕಚೇರಿ, ಬುದ್ಧ - ಬಸವ -ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಲ್ಲಿನ ಜನರು ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಹಿತಾಸಕ್ತಿಗಾಗಿ ಅಲ್ಲಿ ಕಚೇರಿ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನನ್ನನ್ನೂ ಸಹ ಬಹಳ ಕೆಟ್ಟ ಶಬ್ದಗಳಿಂದ ಬೈಯ್ದಿದ್ದಾರೆ. ನಾನು ಜನರ ಅಭಿವೃದ್ಧಿ ಕಾರ್ಯಕ್ಕೆ ಬೈಯಿಸಿಕೊಳ್ಳಲು ಸಹ ಸಿದ್ದನಿದ್ದೇನೆ. ಕುಕನೂರಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿದೆ. ಆದರೆ ಕಟ್ಟಡ ಕಟ್ಟಲು ಜಾಗ ಯಾರೂ ಕೊಡುತ್ತಿಲ್ಲ. ನೂರು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾಗಿದ್ದೇವು. ಭೂಮಿ ಕೊಡಲು ಜನರು ಯಾರೂ ಮುಂದಾಗಲಿಲ್ಲ ಎಂದರು.
ಎಇಇ ಮೌನೇಶ ಪತ್ತಾರ, ಕುಕನೂರು ಎಇಇ ಎಂ. ನಾಗರಾಜ, ಮುಖಂಡರಾದ ಯಂಕಣ್ಣ ಯರಾಶಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಹನುಮಂತಗೌಡ ಚಂಡೂರು, ಕೆರೆಬಸಪ್ಪ ನಿಡಗುಂದಿ, ಮಂಜುನಾಥ ಕಡೇಮನಿ, ಅಶೋಕ ತೋಟದ್, ಸುಧೀರ ಕೊರ್ಲಹಳ್ಳಿ, ಸಂಗಮೇಶ ಗುತ್ತಿ, ಈರಪ್ಪ ಕುಡಗುಂಟಿ, ಪ್ರಶಾಂತ ಆರುಬೆರಳ್ಳಿನ್ ಮತ್ತು ಜೇಸ್ಕಾಂ ಹಿರಿಯ ಅಧಿಕಾರಿಗಳು ಮತ್ತು ನೌಕರರು ಇದ್ದರು.