ಪೋಲಿಯೋ ನಿರ್ಮೂಲನೆಗೆ ಪಣ ತೊಡೋಣ: ನಿರ್ಮಲಾ ಸೀತಾರಾಮನ

KannadaprabhaNewsNetwork |  
Published : Dec 22, 2025, 02:30 AM IST
21ಎಚ್‌ಪಿಟಿ1- ಹೊಸಪೇಟೆಯ ಕಮಲಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. | Kannada Prabha

ಸಾರಾಂಶ

ಮಾನವ ಕುಲಕ್ಕೆ ಶಾಪದಂತಿರುವ ಪೋಲಿಯೋ ವೈರಸ್‌ ಅನ್ನು ಭಾರತ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಹೊಸಪೇಟೆ: ಹಣಕಾಸು ಸಚಿವಾಲಯದ 120 ಅಧಿಕಾರಿಗಳ ತಂಡವು ಹಂಪಿಗೆ ಭೇಟಿ ನೀಡಿ ವಿಜಯನಗರ ಸಾಮ್ರಾಜ್ಯದ ಸಮೃದ್ಧಿ ಸಂದೇಶದ ಜತೆಗೆ ಸಮೃದ್ಧ ಭಾರತ ನಿರ್ಮಾಣದ ಸಂದೇಶ ಕೊಂಡೊಯ್ಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಹಂಪಿಯಲ್ಲಿ ಹುಣಸೆ, ಸೀತಾಫಲ, ಲಕ್ಷ್ಮಣ ಫಲ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಅವರು ನೆಟ್ಟು ನೀರೆರೆದರು. ಬಳಿಕ ಕಮಲಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿದ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನೊಂದಿಗೆ ಹಂಪಿಗೆ ಬಂದಿದ್ದ ಅಧಿಕಾರಿಗಳಿಗೆ ವಿಶ್ವ ಪಾರಂಪರಿಕ ತಾಣ ವೀಕ್ಷಿಸಲು ಅವಕಾಶ ಸಿಕ್ಕಿದೆ. ಇದು ವಿಜಯನಗರ ಸಾಮ್ರಾಜ್ಯದ ಮಹತ್ವ, ವೈಭವ ಅರಿತುಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ಚಿಂತನ ಮಂಥನ ಸಭೆಯನ್ನು ಅಧಿಕಾರಿಗಳೊಂದಿಗೆ ಅರ್ಥಪೂರ್ಣವಾಗಿ ನಡೆಸಲಾಗಿದೆ. ಹಂಪಿಗೆ ಬಂದಿದ್ದಕ್ಕೆ ವಿಜಯನಗರದ ಸಂದೇಶವಾದ ಎಲ್ಲರಿಗೂ ಸಮೃದ್ಧಿ ಎಂಬ ಆದರ್ಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಆದರ್ಶಗಳೊಂದಿಗೆ ವಿವಿಧ ಯೋಜನೆಗಳನ್ನು ಜನರಿಗೆ ನೀಡಿದ್ದು, ಮುಂದಿನ ಬಜೆಟ್ ಮಂಡಿಸಲು ಕೆಲವು ದಿನಗಳ ಕಾಲ ಬಾಕಿ ಇರುವ ಈ ಸಂದರ್ಭದಲ್ಲಿ ವಿಜಯನಗರದಿಂದ ಪ್ರೇರಣೆ ಪಡೆದು 2047ರ ವಿಕಸಿತ ಭಾರತದ ನಿರ್ಮಾಣದ ಗುರಿಯೊಂದಿಗೆ ವಿವಿಧ ಕ್ರಮಗಳ ಮೂಲಕ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಪೋಲಿಯೋ ಮುಕ್ತ ಭಾರತ

ಮಾನವ ಕುಲಕ್ಕೆ ಶಾಪದಂತಿರುವ ಪೋಲಿಯೋ ವೈರಸ್‌ ಅನ್ನು ಭಾರತ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಇದರ ನಿರ್ಮೂಲನೆಯಲ್ಲಿ ತೊಡಗಿರುವ ವೈದ್ಯಕೀಯ ಸಮುದಾಯಕ್ಕೆ ಸೂಕ್ತ ಬೆಂಬಲ ನೀಡಬೇಕಾಗಿದೆ. ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ್‌ಗಳು ಹಾಗೂ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಎಲ್ಲರಿಗೂ ಅಗತ್ಯವಾದ ಸಹಾಯ ದೊರಕುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಹುಣಸೆ ಸಸಿ ನೆಟ್ಟ ಸಚಿವರು

ಕೇಂದ್ರ ಹಣಕಾಸು ಸಚಿವರು ಹಂಪಿಯಲ್ಲಿ ಹುಣಸೆ ಸಸಿ ನೆಟ್ಟು ನೀರೆರೆದರು. ಇದನ್ನು ಪ್ರಸ್ತಾಪಿಸಿದ ಸಚಿವರು, ಕಳೆದ ಅಕ್ಟೋಬರ್ ತಿಂಗಳಲ್ಲಿ ಕೂಡ್ಲಿಗಿ ತಾಲೂಕಿನ ಕಸಾಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಅವರ ಸಂಸದರ ನಿಧಿಯಿಂದ ನಿರ್ಮಿಸಲಾದ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಮತ್ತು ಶೇಂಗಾ ಹಾಗೂ ಹುಣಸೆ ಹಣ್ಣಿನ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ ಸಂದರ್ಭ ನೆನಪಿಸಿದರು.

ಕೂಡ್ಲಿಗಿ ಭಾಗದ ಜನರ ಜೀವನ ಎಷ್ಟು ಕಷ್ಟಕರವಾಗಿದೆ ಎಂಬುದು ನನಗೆ ತಿಳಿದಿದೆ. ನನ್ನೊಂದಿಗೆ ಆಗಮಿಸಿದ 120 ಅಧಿಕಾರಿಗಳೂ ಒಂದೊಂದು ಸಸಿ ನೆಟ್ಟಿದ್ದು ಇದು ಮುಂದಿನ ಭವಿಷ್ಯಕ್ಕೆ ಅನುಕೂಲ ಕಲ್ಪಿಸುವುದಲ್ಲದೇ ಜಿಲ್ಲೆಯ ಹಸಿರು ಮತ್ತು ಪರಿಸರ ಸ್ನೇಹಿಯ ಸಂದೇಶ ನೀಡಲು ಸಾಧ್ಯವಾಗಿದೆ ಎಂದರು.

ಕಾರ್ಪೊರೇಟ್‌ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ, ಸಂಸದ ಈ. ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ. ಎನ್.ಟಿ. ಶ್ರೀನಿವಾಸ್, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ನಾಗರಾಜು ಮದ್ದೀರಲಾ, ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ರವಿ ಅಗರ್ವಾಲ್, ಹಣಕಾಸು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅನುರಾಧಾ ಠಾಕೂರ್, ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ ಶ್ರವಣ್‌, ಹಣಕಾಸು ಇಲಾಖೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ಕೆ. ಮೋಸಸ್ ಚಲೈ, ಕಂಪನಿ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ದೀಪ್ತಿಗೌರ್ ಮುಖರ್ಜಿ ಹಾಗೂ ಇನ್ನಿತರ ಅಧಿಕಾರಿಗಳು ಸಸಿಗಳನ್ನು ನೆಟ್ಟು ನೀರೆರೆದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಸಂಸದರಾದ ಈ. ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ. ಎನ್.ಟಿ. ಶ್ರೀನಿವಾಸ್ ಮಕ್ಕಳಿಗೆ ಲಸಿಕೆ ಹಾಕಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಅಕ್ರಮ್ ಅಲಿ ಷಾ, ಎಸ್ಪಿ ಎಸ್. ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಎಚ್‌., ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಆರ್‌ಸಿಎಚ್‌ಒ ಡಾ. ಬಿ. ಜಂಬಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಈ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಡೂರು ತಾಲೂಕಿನ ಸುಶೀಲಾ ನಗರದ ಬಂಜಾರ ಕಸೂತಿ ಕೇಂದ್ರದಲ್ಲಿ ತಯಾರು ಮಾಡಿದ ಬಂಜಾರ ಉಡುಗೆಯನ್ನು ಸಂಸದ ಈ. ತುಕಾರಾಂ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ