ಪೋಲಿಯೋ ಮುಕ್ತ ಭಾರತಕ್ಕೆ ಎಲ್ಲರ ಸಹಕಾರ ಅಗತ್ಯ: ಸಚಿವ
ಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಕ್ಕಳಿಗೆ ಎರಡು ಹನಿ ಲಸಿಕೆ ಹಾಕುವುದರ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಸಚಿವರು, ಪೋಲಿಯೋ ರೋಗದ ಸಂಪೂರ್ಣ ನಿರ್ಮೂಲನೆಗಾಗಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದ್ದು, ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಸಾರ್ವಜನಿಕರ ಸಹಕಾರ ಬೇಕು. ಐದು ವರ್ಷ ಒಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಮನೆಮನೆಗೂ ತೆರಳಿ ಲಸಿಕೆ ತಲುಪಿಸಲಾಗುತ್ತಿದೆ. ಲಸಿಕೆ ಬಗ್ಗೆ ಪೋಷಕರು ಯಾವುದೇ ಗೊಂದಲ ಅಥವಾ ನಿರ್ಲಕ್ಷ್ಯ ತೋರದೆ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ಡಿ.೨೪ರವರೆಗೆ ಇರುವ ಇದರ ಉಪಯೋಗ ಪಡೆಯಬೇಕು. ಆರೋಗ್ಯ ಇಲಾಖೆಯ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಪೋಲಿಯೋ ಮುಕ್ತ ಭಾರತ ಎಂಬ ಗುರಿಯನ್ನು ಸಾಧಿಸಲು ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ಅಭಿಯಾನದಲ್ಲಿ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಚಿವರು ಕರೆ ನೀಡಿದರು. ಈ ಸಂದರ್ಭ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.