ಜಿಲ್ಲೆಯ 228 ಕೆರೆಗಳ ಬಳಿ ಧ್ವಜಾರೋಹಣ

KannadaprabhaNewsNetwork | Published : Aug 10, 2024 1:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವ ಸಾರಲು 77ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗಳು ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಕೈಗೊಂಡಿವೆ. ಈ ದಿಸೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆಗಳ ಬಳಿ ಆ.15 ರಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲು ಯೋಜನೆ ರೂಪಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವ ಸಾರಲು 77ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗಳು ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಕೈಗೊಂಡಿವೆ. ಈ ದಿಸೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆಗಳ ಬಳಿ ಆ.15 ರಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲು ಯೋಜನೆ ರೂಪಿಸಲಾಗಿದೆ. ಪರಿಸರದ ಸುಸ್ಥಿರತೆ ಮತ್ತು ಜಲಸಂರಕ್ಷಣೆಯ ದೃಷ್ಟಿಯಿಂದ ಅನುಷ್ಠಾನಗೊಳಿಸಿರುವ ಅಮೃತ ಸರೋವರಗಳ ದಂಡೆಯ ಮೇಲೆ ಮಾತೃಭೂಮಿಗಾಗಿ ಪ್ರತಿದಿನ ಎಂಬ ಸಂದೇಶ ಸಾರಲು ಹೊರಟಿದೆ.

ರಾಷ್ಟ್ರದ ಅಖಂಡತೆ ಸಾರಲು ಶಾಲಾ ಮಕ್ಕಳು, ಜನಪ್ರತಿನಿಧಿಗಳು, ಸ್ವ-ಸಹಾಯ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಎಲ್ಲರನ್ನು ಒಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲು ಗ್ರಾಪಂಗಳು ಅಣಿಯಾಗಿವೆ. ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಎರಡು ವರ್ಷಗಳ ಹಿಂದೆ ಜಿಲ್ಲೆಯ 200ಕ್ಕೂ ಹೆಚ್ಚು ಗ್ರಾಮಗಳ ಕೆರೆ, ಕಟ್ಟೆ ಸೇರಿ ಜಲಮೂಲಗಳನ್ನು ಅಮೃತ ಸರೋವರ ಹೆಸರಲ್ಲಿ ಅಭಿವೃದ್ಧಿಪಡಿಸಲು ಹಿಂದೆ ಯೋಜನೆಯನ್ನು ರೂಪಿಸಲಾಗಿತ್ತು. ಈಗ ಬಹುತೇಕ ಅಮೃತ ಸರೋವರ ನಿರ್ಮಾಣ ಕಾರ್ಯ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ವಿಶೇಷವಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಆಯುಕ್ತರು ಆದೇಶಿಸಿದ್ದಾರೆ.

ಮಾತೃಭೂಮಿಗಾಗಿ ಪ್ರತಿದಿನ:

ಅಮೃತ ಸರೋವರ ಬಳಿ ಮಾತೃಭೂಮಿಗಾಗಿ ಪ್ರತಿದಿನ. ಜೀವನದ ಪ್ರತಿಕ್ಷಣವೂ ಬದುಕುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ಅರ್ಪಿಸುವ ನಿಜವಾದ ಗೌರವ- ಪ್ರಧಾನಮಂತ್ರಿಗಳು ಎಂಬ ಸಂದೇಶದ ಫಲಕಗಳನ್ನು ಅಳವಡಿಸಲಾಗಿದೆ. ಶಿಲಾಫಲಕದಲ್ಲಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ರಾಜ್ಯ ಪೊಲೀಸ್ ಹೀಗೆ ಕರ್ತವ್ಯದ ಅವಧಿಯಲ್ಲಿ ಪ್ರಾಣತ್ಯಾಗ ಮಾಡಿದ ವೀರರ ಹೆಸರುಗಳು ಶಿಲಾಫಲಕದಲ್ಲಿವೆ.

ಏನೇನು ಕಾರ್ಯಕ್ರಮ:

ಅಮೃತ ಸರೋವರ ದಂಡೆ ಮೇಲೆ ಧ್ವಜಾರೋಹಣ ನೆರವೇರಿಸುವುದು. ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಮಕ್ಕಳು, ಗ್ರಾಮಸ್ಥರನ್ನು ಸೇರಿಸಿ ದಂಡೆ ಮೇಲೆ ತಿರಂಗಾ ಯಾತ್ರೆ ನಡೆಸುವುದು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ, ನಾಟಕ ಪ್ರದರ್ಶನದಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅಲ್ಲದೇ, ಸಸಿ ನೆಡುವುದು, ಶಾಲಾ ಮಕ್ಕಳು, ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿ ಜಲಮೂಲ ಸ್ವಚ್ಛತೆ, ಪರಿಸರ ಪ್ರಾಮುಖ್ಯತೆ, ಸುಸ್ಥಿರ ಅಭಿವೃದ್ಧಿ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಬಾಕ್

ಜಿಲ್ಲೆಯ 228 ಹಳ್ಳಿಗಳಲ್ಲಿ ಸರೋವರ

ಅದರನ್ವಯ ಹುಕ್ಕೇರಿ ತಾಲೂಕಿನ 11 ಹಳ್ಳಿಗಳು ಸೇರಿದಂತೆ ಬೆಳಗಾವಿ ಜಿಲ್ಲೆಯ 228 ಗ್ರಾಮಗಳಲ್ಲಿ ಸಿದ್ಧಗೊಂಡಿರುವ ಅಮೃತ ಸರೋವರಗಳ ಬಳಿ ಸ್ವಾತಂತ್ರ್ಯೋತ್ಸವದ ವೈವಿಧ್ಯಮಯ ಕಾರ್ಯಕ್ರಮ ಅನುರಣಿಸಲಿವೆ. ತಾಲೂಕಿನ ಗುಡಸ, ಹೊಸೂರ, ಬಡಕುಂದ್ರಿ, ಹೊಸಪೇಟೆ, ಇಸ್ಲಾಂಪುರ, ಕೊಟಬಾಗಿ, ದಡ್ಡಿ, ನಾಗನೂರ ಕೆ.ಡಿ.ಯ ಅಮೃತ ಸರೋವರ ದಡದ ಸುತ್ತ ತಿರಂಗಾ ಯಾತ್ರೆ ನಡೆಯಲಿದೆ.

------------------------------------

--- ಕೋಟ್ ---

ಈಗಾಗಲೇ ಈ ಬಗ್ಗೆ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ 228 ಅಮೃತ ಸರೋವರಗಳನ್ನು ರೂಪಿಸಿದ್ದು, ಎಲ್ಲ ಕಡೆ ಆ.15 ರಂದು ವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ದೇಶಭಕ್ತಿ ಕುರಿತಾದ ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು.

ರಾಹುಲ್ ಶಿಂಧೆ, ಜಿಪಂ ಸಿಇಒ

--- ಕೋಟ್ ---

ಹುಕ್ಕೇರಿ ತಾಲೂಕಿನ 11 ಅಮೃತ ಸರೋವರಗಳ ದಡದಲ್ಲಿ ಈ ಸಲದ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವ ಎತ್ತಿ ಹಿಡಿಯುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಅಮೃತ ಸರೋವರಗಳ ಸ್ಮರಣೀಯ ಸ್ವಾತಂತ್ರ್ಯೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.

- ಟಿ.ಆರ್.ಮಲ್ಲಾಡದ, ತಾಪಂ ಇಒ

Share this article