
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ₹೩೮ ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಹೊಸ ಹೆಜ್ಜೆ ಸರ್ಕಾರ ಇರಿಸಿದೆ. ಅದೇ ತೆರನಾಗಿ ನಮ್ಮ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಯುಕೆಪಿ ಯೋಜನೆಗಳಿಗೆ ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಿ, ಕಲಬುರ್ಗಿ, ಮಂಗಳೂರು ಮೊದಲಾದ ಕಡೆಗಳಲ್ಲಿ ಸಚಿವ ಸಂಪುಟ ಸಭೆ ನಡೆದಿದೆ, ನಮ್ಮಲ್ಲಿಯೂ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಬರ ನಿರ್ವಹಣೆ ಹಾಗೂ ಮೇಲುಸ್ತುವಾರಿಗಾಗಿ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ಸಹ ರಚಿಸಿದ್ದು, ಈ ಸಮಿತಿ ಕಾಲ ಕಾಲಕ್ಕೆ ಸಭೆ ನಡೆಸುತ್ತಿದೆ, ಬರಗಾಲದ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಪ್ರಿಲ್ ತಿಂಗಳಲ್ಲಿಯೇ ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿತ್ತು. ಕೇಂದ್ರ ಸರ್ಕಾರ ರೂಪಿಸುವ ಬರ ನಿರ್ವಹಣೆ ಮಾರ್ಗಸೂಚಿ ಅನ್ವಯ ನಿಭಾಯಿಸಲಾಗುತ್ತಿದೆ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಮೊದಲಾದವುಗಳನ್ನು ಸಮರ್ಥವಾಗಿ ಸರ್ಕಾರಗಳು ಎದುರಿಸಿದರೂ ಸಹ ಪ್ರಾಕೃತಿಕ ವಿಕೋಪಗಳಿಂದ ಆಗುವ ಹಾನಿಯನ್ನು ಯಾರೂ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಬರ ಪರಿಸ್ಥಿತಿ ಕೇಂದ್ರ ಸರ್ಕಾರಕ್ಕೆ ವಾಸ್ತವಿಕ ವರದಿ ನೀಡಬೇಕಾಗಿರುವುದರಿಂದ ಹಂತ ಹಂತವಾಗಿ ಬರ ಘೋಷಣೆ ಮಾಡಲಾಗುತ್ತಿದೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮೂರು ವಾರಗಳ ಮಳೆ ಕೊರತೆ, ತೇವಾಂಶ ಕೊರತೆ, ಬೆಳೆ ಹಾನಿ ಎಲ್ಲ ಆಯಾಮಗಳಲ್ಲಿಯೂ ಅವಲೋಕಿಸಿ ಬರ ಘೋಷಣೆ ಮಾಡಲಾಗುತ್ತಿದೆ, ಯಾವ ವಿಷಯದಲ್ಲಿಯೂ ಹಿನ್ನೆಡೆಯಾಗಬಾರದು ಎಂದು ಅತ್ಯಂತ ವೈಜ್ಞಾನಿಕವಾಗಿ, ನಿಖರವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುತ್ತಿದೆ ಎಂದರು.ಅತೀ ಹೆಚ್ಚು ಬರ ಎದುರಿಸಿದ ಜಿಲ್ಲೆ ವಿಜಯಪುರ, ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ ಈ ತಾಲೂಕುಗಳು ಅತ್ಯಂತ ಭೀಕರ ಬರ ಪರಿಸ್ಥಿತಿ ಎದುರಿಸುವ ತಾಲೂಕುಗಳು, ಎರಡನೇ ಪಟ್ಟಿಯಲ್ಲಿಯೂ ಇಂಡಿ, ಚಡಚಣ ತಾಲೂಕುಗಳು ಹೆಸರು ಇರದೇ ಇರುವುದು ಮನಸ್ಸಿಗೆ ಬೇಜಾರಾಗಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದೆ. ಸಂಜೆ ಮತ್ತೆ 29 ತಾಲೂಕುಗಳು ಘೋಷಣೆ ಆಗಿ ಇಂಡಿ, ಚಡಚಣ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಯಿತು. ಇದರಿಂದ ಸಮಾಧಾನವಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದೆ.