ಕನ್ನಡಪ್ರಭ ವಾರ್ತೆ ರಾಯಚೂರು
ಹೋಳಿ ಹುಣ್ಣಿಮೆ ಪ್ರಯುಕ್ತ ಭಾನುವಾರ ರಾತ್ರಿ ಜಿಲ್ಲಾದ್ಯಂತ ಕಾಮದಹನ ಕಾರ್ಯಕ್ರಮ ನಡೆಯಿತು. ದೂಲಂಡಿ ನಿಮಿತ್ತ ಸೋಮವಾರ ಬೆಳಗ್ಗೆಯಿಂದ ಆರಂಭಗೊಂಡ ಹಬ್ಬವು ಮಧ್ಯಾಹ್ನದವರೆಗೆ ನಡೆಯಿತು.
ರಾಯಚೂರು ನಗರದ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು ಬಣ್ಣ ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಸ್ಥಳೀಯ ತಿಮ್ಮಾಪುರಪೇಟೆ, ವಾಸವಿ ನಗರ, ಉಪ್ಪಾರವಾಡಿ, ಭಂಗಿ ಕುಂಟ, ಜವಾರಿ ಗಲ್ಲಿ, ಕೋಟೆ ಬಡಾವಣೆ ಸೇರಿ ವಿವಿಧೆಡೆ ಯುವಕರು ಬಣ್ಣದ ನೀರು ತುಂಬಿದ ಮಡಿಕೆ ಹೊಡೆದು ರಂಗಿನಲ್ಲಿ ಮುಳುಗಿದ್ದರೇ ಮಕ್ಕಳು ಪಿಚಕಾರಿ ಹಿಡಿದು ಬಣ್ಣ ಎರಚಿ ಸಂಭ್ರಮಿಸಿದರು.ಪ್ರತಿ ವರ್ಷ ಹಬ್ಬ ಪೂರ್ಣಗೊಳ್ಳುತ್ತಿದ್ದಂತೆ ಸಮೀಪದ ತುಂಗಭದ್ರಾ, ಕೃಷಿ ನದಿಗಳಿಗೆ ತೆರಳಿ ಸ್ನಾನ ಮಾಡಿದರು. ಈ ಸಲ ಬರ ಆವರಿಸಿದ್ದರಿಂದ ನದಿಯಲ್ಲಿ ನೀರಿಲ್ಲದಕ್ಕೆ ಮನೆಗಳಲ್ಲಿಯೇ ಸ್ನಾನಾದಿಗಳನ್ನು ಮಾಡಿದರು.
ಹಿಂದೆ ಹೋಳಿ ಎಂದರೆ ಸಾಖೂ ರಸ್ತೆಗಳ ಮೇಲೆ ಯುವಕರ ಓಡಾಟ, ಬೈಕ್‌ಗಳ ಸದ್ದು, ಜನಸಾಮಾನ್ಯರ ಭಾಗವಹಿಸುವಿಕೆ, ಸಾಮೂಹಿಕ ಕಾರ್ಯಕ್ರಮಗಳ ಆಯೋಜನೆ ಮಾಡುವುದು ಸೇರಿದಂತೆ ಇತರೆ ಹಬ್ಬದ ಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಈ ಸಲ ಬೇಸಿಗೆ ಬಿಸಿ, ಬರ, ನೀರಿನ ಕೊರತೆ, ಚುನಾವಣೆ, ಪರೀಕ್ಷಾ ಸಮಯವಾಗಿದ್ದರಿಂದ ಮುಂಚೆಯಂತೆ ಹಬ್ಬದ ಸಂಭ್ರಮವು ಅಷ್ಟಾಗಿ ಗೋಚರಿಸಿರಲಿಲ್ಲ.