)
ಬೆಂಗಳೂರು : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಇತ್ತೀಚೆಗೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆಗೆ ಗುಪ್ತಚರ ವಿಭಾಗದ ವೈಫಲ್ಯ, ಗೃಹ ಇಲಾಖೆ ಅಸಮರ್ಥತೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದಿರುವುದೇ ಪ್ರಮುಖ ಕಾರಣ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹಾಗೂ ಇತರ ಮುಖಂಡರು ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಸಮೀಪ ಹಾದು ಹೋಗುವಾಗ ತೊಂದರೆ ಉಂಟಾಗುವ ಸಾಧ್ಯತೆ ಇದ್ದರೂ ಮುನ್ನೆಚ್ಚರಿಕೆ ಅಥವಾ ಮಾರ್ಗ ಬದಲಾವಣೆಯಂಥ ಕ್ರಮ ಕೈಗೊಂಡಿಲ್ಲ. ಗಲಭೆ ಸಾಧ್ಯತೆ ಕುರಿತ ಮುನ್ನೆಚ್ಚರಿಕಾ ಕ್ರಮಗಳ ಕೊರತೆ, ಕಾಂಗ್ರೆಸ್ ಸರ್ಕಾರದ ಅಜಾಗರೂಕತೆ ತೋರಿಸುತ್ತದೆ. ಹಬ್ಬಕ್ಕೂ ಮುನ್ನ ಸಮುದಾಯ ನಾಯಕರೊಂದಿಗೆ ಸಭೆ, ಶಾಂತಿ ಸಮಿತಿ ಚಟುವಟಿಕೆ, ಮಾರ್ಗ ನಿರ್ವಹಣೆಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ.
ಮೆರವಣಿಗೆ ಮಾರ್ಗದ 500 ಮೀಟರ್ ಅಂತರದಲ್ಲಿದ್ದ ಮಸೀದಿ ಬಳಿ ಪೊಲೀಸರ ಸೂಕ್ತ ನಿಯೋಜನೆ ಇಲ್ಲದ ಕಾರಣ ಕಲ್ಲು ತೂರುವ ಘಟನೆ ನಡೆದಿದೆ. ಘಟನೆ ಬಳಿಕ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂಸಾಚಾರ ಆರಂಭವಾದ ಬಳಿಕ 21 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಪುನರಾವರ್ತಿತ ಅಪರಾಧಿಗಳನ್ನು ಮುಂಚಿತವಾಗಿ ಬಂಧಿಸಿರಲಿಲ್ಲ ಎಂದು ಸಮಿತಿಯ ವರದಿಯಲ್ಲಿ ವಿವರಿಸಲಾಗಿದೆ.
ಮೆರವಣಿಗೆಯ ಸುರಕ್ಷಿತ ನಿರ್ವಹಣೆಗೆ ಜಿಲ್ಲಾಡಳಿತ ಯಾವುದೇ ಸ್ಪಷ್ಟ ಮಾರ್ಗಸೂಚಿ ನೀಡಿರಲಿಲ್ಲ. ಸ್ಥಳೀಯ ಜನ ಸರ್ಕಾರದ ಕ್ರಮವನ್ನು ಓಲೈಕೆ ರಾಜಕಾರಣ ಎಂದು ಕಟುವಾಗಿ ಟೀಕಿಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಗಣೇಶ ಮೆರವಣಿಗೆ ವೇಳೆ ಭದ್ರತೆ ಮೇಲ್ವಿಚಾರಣೆಗಾಗಿ ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್, ದೇಹರಕ್ಷಕ, ಲಾಠಿ-ಶೀಲ್ಡ್ ಮುಂತಾದ ಭದ್ರತಾ ಸಾಮಗ್ರಿಗಳ ಕೊರತೆ ಇತ್ತು. ಪೊಲೀಸರು ಪ್ರದೇಶವನ್ನು ಹಿಡಿತದಲ್ಲಿರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಂಧಿತ ಆರೋಪಿಗಳು ರಹೀಂ ನಗರದವರಲ್ಲ. ಬೇರೆ ಪ್ರದೇಶದವರಾಗಿರುವುದು ಸ್ಪಷ್ಟ. ಇದು ಪೂರ್ವ ನಿಯೋಜಿತ ಸಂಚು ಎಂಬುದನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿದ್ಯುತ್ ಸರಬರಾಜು ನಿಲ್ಲಿಸುವುದು. ಕಲ್ಲುಗಳನ್ನು ಸಂಗ್ರಹಿಸುವುದು ಮತ್ತು ಪೂಜಾಸ್ಥಳದಲ್ಲೇ ಶಸ್ತ್ರೋಪಕರಣಗಳನ್ನು ಇಡುವುದು ಹಿಂಸೆಯನ್ನು ಉದ್ದೇಶಿತವಾಗಿ ಸೃಷ್ಟಿಸಲು ನಡೆದ ಕೃತ್ಯಗಳೆಂದು ಕಾಣಿಸುತ್ತದೆ. ಗುಪ್ತಚರ ವರದಿ ಕಡೆಗಣಿಸಿದ್ದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಬೇಕು. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಕಾರಣ ಮಂಡ್ಯ ಜಿಲ್ಲಾ ಪೊಲೀಸ್ ಜವಾಬ್ದಾರಿ ಹೊರಬೇಕು. ಕ್ಷಿಪ್ರ ಸ್ಪಂದನಾ ವ್ಯವಸ್ಥೆ ಸ್ಥಾಪಿಸದ ಮಂಡ್ಯ ಜಿಲ್ಲಾಧಿಕಾರಿಯೂ ತಪ್ಪಿತಸ್ಥರಾಗಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಸಮಿತಿ ಪ್ರಮುಖ ಶಿಫಾರಸುಗಳು
- ಸ್ವತಂತ್ರ ನ್ಯಾಯಾಂಗ ಆಯೋಗದಿಂದ ತನಿಖೆ ನಡೆಸಬೇಕು
- ಹಿಂಸಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು
- ಸ್ಥಳೀಯ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಬೇಕು
- ರಾಜಕೀಯ ಹಸ್ತಕ್ಷೇಪ ಇಲ್ಲದೆ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಬೇಕು
- ಹಬ್ಬಕ್ಕೂ ಮುನ್ನ ಹಿಂದೂ-ಮುಸ್ಲಿಂ ನಾಯಕರ ಶಾಂತಿ ಸಭೆ ನಡೆಸಬೇಕು