ಪುಸ್ತಕ ಪ್ರೀತಿ ಬೆಳೆಸಲು ಗೃಹ ಗ್ರಂಥಾಲಯ ಸಹಕಾರಿ: ಬಿ.ಎಂ. ಹರಪನಹಳ್ಳಿ

KannadaprabhaNewsNetwork |  
Published : Jul 03, 2026, 02:30 AM IST
ಕಾರ್ಯಕ್ರಮದಲ್ಲಿ ಗೃಹ ಗ್ರಂಥಾಲಯದ ಫಲಾನುಭವಿ ಬಿ.ಎಚ್‌. ಬೆಟಗೇರಿ ಅವರಿಗೆ ಗ್ರಂಥಗಳನ್ನು ಹಾಗೂ ಪ್ರಶಸ್ತಿ ಪತ್ರ ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ಜನರಲ್ಲಿ ಪುಸ್ತಕ ಓದುವ ಪ್ರವೃತ್ತಿ ಕ್ಷೀಣಿಸುತ್ತಿದ್ದು, ಇಂದಿನ ಪೀಳಿಗೆ ಮೊಬೈಲ್‌ ಗೀಳಿನಿಂದ ಹೊರಬರಬೇಕಾಗಿದೆ. ಜಾಲತಾಣಗಳು ಎಷ್ಟೇ ಸಿದ್ಧ ಮಾಹಿತಿ ಒದಗಿಸಿದರೂ ಕೈಯಲ್ಲಿ ಪುಸ್ತಕ ಹಿಡಿದು ಓದಿ ಪಡೆದ ಅನುಭವ ನೀಡುವ ನೆಮ್ಮದಿಯನ್ನು ಮೊಬೈಲ್‌ಗಳಿಂದ ಪಡೆಯಲಾಗದು.

ಮುಳಗುಂದ: ಜನರಲ್ಲಿ ಪುಸ್ತಕ ಪ್ರೀತಿ ಬೆಳೆಯಲು ಗೃಹ ಗ್ರಂಥಾಲಯಗಳು ಸಹಕಾರಿಯಾಗಿದ್ದು, ಮನೆಗೊಂದು ಪುಟ್ಟ ಗ್ರಂಥಾಲಯ ಇರುವುದು ಅಗತ್ಯವಾಗಿದೆ ಎಂದು ಸಾಹಿತಿ, ಚಿಂತಕ ಬಿ.ಎಂ. ಹರಪನಹಳ್ಳಿ ತಿಳಿಸಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ಕಬ್ಬಿಗರ ಕೂಟ ಹಮ್ಮಿಕೊಂಡಿದ್ದ ಗೃಹ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನರಲ್ಲಿ ಪುಸ್ತಕ ಓದುವ ಪ್ರವೃತ್ತಿ ಕ್ಷೀಣಿಸುತ್ತಿದ್ದು, ಇಂದಿನ ಪೀಳಿಗೆ ಮೊಬೈಲ್‌ ಗೀಳಿನಿಂದ ಹೊರಬರಬೇಕಾಗಿದೆ. ಜಾಲತಾಣಗಳು ಎಷ್ಟೇ ಸಿದ್ಧ ಮಾಹಿತಿ ಒದಗಿಸಿದರೂ ಕೈಯಲ್ಲಿ ಪುಸ್ತಕ ಹಿಡಿದು ಓದಿ ಪಡೆದ ಅನುಭವ ನೀಡುವ ನೆಮ್ಮದಿಯನ್ನು ಮೊಬೈಲ್‌ಗಳಿಂದ ಪಡೆಯಲಾಗದು ಎಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಎಚ್‌. ಬೆಟಗೇರಿ ಮಾತನಾಡಿ, ಯುವ ಸಮುದಾಯದಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಕಬ್ಬಿಗರ ಕೂಟ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಪ್ರಾರಂಭಿಸಿದ ಗೃಹ ಗ್ರಂಥಾಲಯ ಯೋಜನೆ ಪ್ರಯೋಜನಕಾರಿಯಾಗಿದೆ ಎಂದರು.

ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಪ್ರಾಸ್ತವಿಕವಾಗಿ ಮಾತನಾಡಿ, ಕಬ್ಬಿಗರ ಕೂಟ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಗದಗ ಪರಿಸರದಲ್ಲಿ ಗ್ರಂಥಾಲಯ ಚಳವಳಿ ಪ್ರಾರಂಭಿಸಿದ್ದು, ಗೃಹ ಗ್ರಂಥಾಲಯ ಪ್ರಾರಂಭಿಸ ಬಯಸುವ ಪುಸ್ತಕ ಪ್ರಿಯರಿಗೆ 10 ಗ್ರಂಥಗಳನ್ನು ಉಚಿತವಾಗಿ ನೀಡುತ್ತದೆ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.ಸಾಹಿತಿ ಬಸವರಾಜ ಗಣಪ್ಪನವರ ಮಾತನಾಡಿ, ಸದಾ ಹೊಸ ಚಿಂತನೆ, ವಿನೂತನ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘಟನೆಯಾಗಿ ಕಾರ್ಯಪ್ರವೃತ್ತಗೊಂಡ ಗದುಗಿನ ಅಖಿಲ ಕರ್ನಾಟಕ ಕಬ್ಬಿಗರ ಕೂಟ ಸರ್ಕಾರ, ವಿಶ್ವವಿದ್ಯಾಲಯಗಳಿಂದ ಮಾಡಲಾಗದಂತಹ ಗುರುತರ ಹೊಣೆಯನ್ನು ಸ್ವತಂತ್ರವಾಗಿ ಮಾಡುತ್ತಿದ್ದು, ಅದು ನೀಡುವ ಉಚಿತ ಗ್ರಂಥದಾನ ಗದಗ ಸಾಹಿತ್ಯಕ ಪರಿಸರದಲ್ಲಿ ಕ್ರಾಂತಿಕಾರಿ ಅಲೆ ಸೃಷ್ಟಿಸಿದೆ. 50 ವರ್ಷಗಳ ಹಿರಿಯ ಸಾಹಿತ್ಯ ಸಂಘಟನೆಯ ಕಾರ್ಯವನ್ನು ಸಾಹಿತ್ಯಪ್ರಿಯರು ಪ್ರೋತ್ಸಾಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ನಯಸೇನ, ಬಾಲಲೀಲಾ ಶಿವಯೋಗಿಗಳು ಹಾಗೂ ದಾವಲ್‌ ಮಲಿಕ್‌ರಂತಹ ಮಹಾತ್ಮರಿಂದ ಸೌಹಾರ್ದದ ತಾಣವಾಗಿ ಹೆಸರಾದ ಮುಳಗುಂದದಲ್ಲಿ ದ್ವಿತೀಯ ಗೃಹ ಗ್ರಂಥಾಲಯಕ್ಕೆ ಚಾಲನೆ ದೊರಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಗೃಹ ಗ್ರಂಥಾಲಯದ ಫಲಾನುಭವಿ ಬಿ.ಎಚ್‌. ಬೆಟಗೇರಿ ಅವರಿಗೆ ಗ್ರಂಥಗಳನ್ನು ಹಾಗೂ ಪ್ರಶಸ್ತಿ ಪತ್ರ ಹಸ್ತಾಂತರಿಸಲಾಯಿತು. ಡಾ. ಎಸ್.ಸಿ. ಚವಡಿ, ಡಾ. ಎ.ಬಿ. ಮೇಟಿ, ಟಿ.ಐ. ಗದುಗಿನ, ಮರುಳಸಿದ್ಧಪ್ಪ ಹಾಳಕೇರಿ, ಎಂ.ಕೆ. ಸುಲಾಖೆ, ಡಿ.ಎಂ. ಕೆರೂರ, ಬಿ.ಪಿ. ಕಮ್ಮಾರ, ಬಿ.ಪಿ. ಮಾಡಳ್ಳಿ, ಮುರಗಯ್ಯ ವೀರಸ್ವಾಮಿಮಠ, ನಜೀರ ಸಂಶಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!