ಕೊಪ್ಪಳ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಅಪರ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ "ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು " ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಹೇಳಿದ್ದು, ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಶಾ ಹೇಳಿಕೆ ವಿರೋಧಿಸಿ ಜ. 6ರಂದು ಕೊಪ್ಪಳ ಬಂದ್: ಬೆಟ್ಟದೂರು
ಕೊಪ್ಪಳ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಜ. ೬ರಂದು ಕೊಪ್ಪಳ ಬಂದ್ ಕರೆ ನೀಡಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಸಂಚಾಲಕ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.ಕೊಪ್ಪಳ ಮಿಡಿಯಾ ಕ್ಲಬ್‌ನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ದೇಶಕ್ಕೆ ಸಂವಿಧಾನ ನೀಡಿರುವ ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಸಂಸತ್ತಿನಲ್ಲಿಯೇ ಅಪಮಾನ ಆಗುವ ರೀತಿಯಲ್ಲಿ ಹೇಳಿಕೆ ನೀಡಿದ್ದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ. ಇದು ಅವರ ಒಳಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಕಿಡಿಕಾರಿದ್ದಾರೆ.ಗಾಂಧಿ ಜೊತೆ ಭಿನ್ನಾಭಿಪ್ರಾಯ ಇದ್ದರೂ ಅವರಿಗೆ ಅಗೌರವದಿಂದ ನಡೆದವರಲ್ಲ. ಅಂಬೇಡ್ಕರ್ ಅವರು ಸಮಾನತೆ ಬದುಕಿಗಾಗಿ ಜೀವನವನ್ನೇ ಮೀಸಲಿಇಟ್ಟು, ಹೋರಾಟ ಮಾಡಿದ್ದಾರೆ. ಶೋಷಿತರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ್ದಾರೆ. ಅಂಥ ಮಹಾನ್ ನಾಯಕರ ಕುರಿತು ಮಾತನಾಡುವಾಗ ಎಚ್ಚರದಿಂದ ಇರಬೇಕು.ಅವರು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಲು ಗಾಂಧೀಜಿ ಅವರೇ ಹೆಸರು ಸೂಚಿಸಿದ್ದರು. ದೇಶಕ್ಕೆ ಸುಭದ್ರ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಸ್ಮರಣೆ ಬಿಟ್ಟು ದೇವರ ಸ್ಮರಣೆ ಮಾಡಿ ಎಂದಿರುವುದು ಮೇಲ್ನೋಟಕ್ಕೆ ಖಂಡಿಸಬೇಕು ಎನಿಸುತ್ತದೆ. ಇದರಲ್ಲಿ ಅವರ ಹಿಡನ್ ಅಜೆಂಡಾ ಇರುವುದು ಗೊತ್ತಾಗುತ್ತದೆ ಎಂದರು.ಜಗತ್ತಿನಲ್ಲಿ ಬೇರೆ ದೇಶಗಳ ಸಂವಿಧಾನ ರಚನೆಯಾಗಿ ೩೦-೪೦ ವರ್ಷಕ್ಕೆ ವಿರೋಧ ವ್ಯಕ್ತವಾಗಿವೆ. ಆದರೆ, ಭಾರತದಲ್ಲಿ ಸಂವಿಧಾನ ತಿದ್ದುಪಡಿಯಾಗಿದ್ದರೂ ಸುಭದ್ರವಾಗಿದೆ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ಬಾಬಾ ಸಾಹೇಬರ ಬಗ್ಗೆ ಹೇಳಿರುವುದು ಸರಿಯಲ್ಲ. ಅಂಬೇಡ್ಕರ್ ಅವರು ಶೋಷಿತರಿಗೆ ದೇವರ ಸ್ಥಾನದಲ್ಲಿದ್ದಾರೆ. ಶೋಷಣೆಗೆ ಒಳಗಾಗದವರಿಗೆ ಅವರ ನೋವು ಗೊತ್ತಾಗಲ್ಲ ಎಂದರು.ಶಾ ಅವರ ಹೇಳಿಕೆಯನ್ನು ಖಂಡಿಸಿ ಜ. ೬ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸ್ವಯಂ ಪ್ರೇರಿತ ಬಂದ್‌ಗೂ ಕರೆ ನೀಡಿದ್ದೇವೆ ಎಂದರು.ಸಮಿತಿಯ ಮುಖಂಡ ಹನುಮೇಶ ಕಡೆಮನಿ ಮಾತನಾಡಿ, ಜ. ೬ರಂದು ಕೊಪ್ಪಳ ಬಂದ್ ಕರೆ ನೀಡಲಾಗಿದ್ದು, ಈಗಾಗಲೇ ಹಲವು ಸಂಘಟನೆಗಳ ಜೊತೆ ಮಾತನಾಡಿದಾಗ ಬೆಂಬಲಿಸುವುದಾಗಿ ಹೇಳಿದ್ದಾರೆ. ಬೆಳಗ್ಗೆ ತಾಲೂಕು ಕ್ರೀಡಾಂಗಣದಿಂದ ಮೆರವಣಿಗೆ ಪ್ರಾರಂಭ ಮಾಡಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ವೃತ್ತಕ್ಕೆ ಜಾಥಾ ತೆರಳಲಿದೆ. ಈ ಜಾಥಾದಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.ಟಿ. ರತ್ನಾಕರ, ಈಶಪ್ಪ ಛಲವಾದಿ, ಸಲೀಂ ಖಾದ್ರಿ ಇದ್ದರು.