ಕನ್ನಡಪ್ರಭ ವಾರ್ತೆ, ತುಮಕೂರುನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ನವೀಕರಣಗೊಂಡ ಜಿಲ್ಲಾ ಮತ್ಸ್ಯಾಲಯವನ್ನು ಸೋಮವಾರ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಲೋಕಾರ್ಪಣೆ ಮಾಡಿದರು.ಮತ್ಸ್ಯಾಲಯವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರು ಹಾಗೂ ವಿಶೇಷವಾಗಿ ಮಕ್ಕಳಿಗೆ ಅಲಂಕಾರಿಕ ಮೀನು ಸೇರಿದಂತೆ ಜಲಚರ ಪ್ರಪಂಚದ ಪರಿಚಯ ನೀಡಲು ಮತ್ಸ್ಯಾಲಯವನ್ನು ನಿರ್ಮಿಸಲಾಗಿದೆ. ವಿವಿಧ ಬಗೆಯ ಮೀನುಗಳನ್ನು ನೇರವಾಗಿ ನೋಡುವ ಅವಕಾಶ ಇರುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಮನರಂಜನೆ ದೊರೆಯಲಿದೆ. ಅಲ್ಲದೆ ಜಲಚರಗಳ ಆಹಾರ ಸರಪಳಿಯ ಮಹತ್ವದ ಬಗ್ಗೆ ಅರಿವು ಮೂಡಲಿದೆ. ಈ ಮತ್ಸ್ಯಾಲಯವನ್ನು ನಿರ್ಮಿಸಿರುವುದರಿಂದ ನೈಸರ್ಗಿಕ ಸ್ಥಳೀಯವಾಗಿ ಲಭ್ಯವಿರುವ ಹಾಗೂ ಅಳಿವಿನ ಹಂಚಿನಲ್ಲಿರುವ ಮೀನಿನ ಸಂತತಿಯನ್ನು ಸಂರಕ್ಷಿಸಬಹುದಾಗಿದೆ ಎಂದು ತಿಳಿಸಿದರು.ಮತ್ಸ್ಯಾಲಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಕೇವಲ 10 ರೂ.ಗಳನ್ನು ನಿಗದಿಪಡಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಈ ಮತ್ಸ್ಯಾಲಯದ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ ಎಂದು ತಿಳಿಸಿದರು.ಜಿಲ್ಲಾ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ನವೀಕೃತಗೊಂಡ ಮತ್ಸ್ಯಾಲಯದಲ್ಲಿ 36 ಅಕ್ವೇರಿಯಂಗಳಲ್ಲಿ ವಿವಿಧ ಬಗೆಯ ಸುಮಾರು 70 ಕ್ಕೂ ಹೆಚ್ಚಿನ ಪ್ರಭೇದದ ಅಲಂಕಾರಿಕ ಮೀನುಗಳನ್ನು ವೀಕ್ಷಿಸಲು ಅವಕಾಶವಿದೆ. ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಈ ಮತ್ಸ್ಯಾಲಯ ನವೀಕರಣವನ್ನು ಕೈಗೊಳ್ಳಲಾಗಿದೆ. ಮಕ್ಕಳಿಗಾಗಿ ಮುಂದಿನ ದಿನಗಳಲ್ಲಿ 12 ಲಕ್ಷ ರು. ವೆಚ್ಚದಲ್ಲಿ ಕನಿಷ್ಠ ೪೦ ಆಸನ ಸಾಮರ್ಥ್ಯದ ಆ್ಯಂಪಿ ಥಿಯೇಟರ್ ನಿರ್ಮಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯು ಹೊರತಂದಿರುವ 2024-25ನೇ ಸಾಲಿನ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನ ಕುರಿತ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿತು. ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಂಜುಂಡಪ್ಪ ಎಂ.ಹೆಚ್., ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಕೆ.ಸಿ., ವಿವಿಧ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.