ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಇತ್ತೀಚೆಗೆ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ದಲಿತ ಮಹಿಳೆ ಕಟ್ಟಿಗೆ ತರಲು ಹೋದಾಗ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು, ಘಟನೆ ಕುರಿತು ಛಲವಾದಿ ನಾರಾಯಣಸ್ವಾಮಿ ಮೃತ ಮಹಿಳೆ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಮೂರು ಜನ ದಲಿತರ ಮೇಲೆ ಕೊಲೆ, ಅತ್ಯಾಚಾರದಂತಹ ಬೀಕರ ಘಟನೆಗಳು ಜರುಗಿವೆ. ಆದರೂ ಸರ್ಕಾರದ ಒಬ್ಬರೇ ಒಬ್ಬ ಪ್ರತಿನಿಧಿ ಘಟನೆ ಖಂಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನೂ ಗೃಹ ಸಚಿವ ಪ್ರಿಯಾಂಕ ಖರ್ಗೆಯವರು ದಲಿತರ ಮೇಲೆ ನಡೆಯುತ್ತಿರುವ ಕೃತ್ಯಗಳ ನಿಯಂತ್ರಣ ಮಾಡಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲು ವಿಫಲರಾಗಿದ್ದಾರೆ. ದಲಿತರ ರಕ್ಷಣೆ ಮಾಡಬೇಕಾದ ಖರ್ಗೆಯವರು ಆರ್‌ಎಸ್‌ಎಸ್‌ನ ಜಪ ಮಾಡುತ್ತಿದ್ದಾರೆ. ಖರ್ಗೆಯವರಿಗೆ ಗೃಹ ಖಾತೆ ಬದಲು ಆರ್‌ಎಸ್‌ಎಸ್ ಕಾವಲು ಖಾತೆ ನೀಡಬೇಕೆಂದು ವ್ಯಂಗ್ಯವಾಡಿದರು.
ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ನೌಕರಿ ನೀಡಬೇಕು, ನಗದು ಪರಿಹಾರ ಹಾಗೂ ಜಮೀನು ಮಂಜೂರು ಮಾಡಿ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಗೃಹ ಖಾತೆಯನ್ನು ಅನುಭವಿ ಶಾಸಕರಿಗೆ ನೀಡಿ ಖರ್ಗೆರವರನ್ನು ಗೃಹ ಖಾತೆಯಿಂದ ಬದಲಾಯಿಸಲು ಸಿಎಂ ಮುಂದಾಗಬೇಕೆಂದು ಒತ್ತಾಯಿಸಿದರು.
ಸಚಿವ ನಾಗೇಂದ್ರರವರು ಪರಿಶಿಷ್ಟ ಪಂಗಡದ ನಿಗಮದ 187 ಕೋಟಿ ರು. ಅನುದಾನ ನುಂಗಿದ್ದಾರೆ, ಈ ಭ್ರಷ್ಟಚಾರದ ಹಣವು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಆಂದ್ರಪ್ರದೇಶದ ಚುನಾವಣೆಯಲ್ಲಿ ಬಳಕೆಯಾಗಿದೆ. ದಲಿತರ ಅಭಿವೃದ್ಧಿಗೆ ಮೀಸಲಾದ ಅನುದಾನ ದುರ್ಬಳಕೆ ಮಾಡಿಕೊಂಡ ಸಚಿವರು ಹಾಗೂ ಕಾಂಗ್ರೆಸ್ ಪಕ್ಷ ದೇಶದ ಪವಿತ್ರ ಸಂವಿಧಾನ ಹಿಡಿದುಕೊಂಡು ದಲಿತರು ಎಂದು ಹೇಳುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ತಾಲೂಕು ಅಧ್ಯಕ್ಷ ನಾಗಭೂಷಣ, ಮುಖಂಡರಾದ ರವೀಂದ್ರ ಜಲ್ದಾರ, ಆರ್.ರುದ್ರಯ್ಯ, ಜಗನಾಥ ಕುಲಕರ್ಣಿ ಇದ್ದರು.
ಕವಿತಾಳ: ರಾಯಚೂರಿನಿಂದ ಲಿಂಗಸುಗೂರಿಗೆ ತೆರಳುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಅವರನ್ನು ಸಮೀಪದ ಹಿರೇಹಣಗಿ ಗ್ರಾಮದ ಬಳಿ ರೈತರು ತಡೆದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ರೈತರಿಂದ ಮನವಿ ಸ್ವೀಕರಿಸಿ, ಈ ಕುರಿತು ತಕ್ಷಣವೇ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ, ರೈತರ ಜಮೀನುಗಳಿಗೆ ಸುಲಭವಾಗಿ ತೆರಳಲು ಸೂಕ್ತ ಸೇತುವೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.