ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಕೇವಲ ಆರ್‌ಎಸ್‌ಎಸ್ ವಿರುದ್ಧ ದ್ವೇಷದ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಕೇವಲ ಸೈದ್ಧಾಂತಿಕ ದ್ವೇಷದ ಸಾಧನೆಯಲ್ಲಿ ನಿರತರಾಗಿದ್ದಾರೆ ಎಂದರು.
ಸಚಿವರ ಸ್ವಕ್ಷೇತ್ರ ಚಿತ್ತಾಪುರದಲ್ಲೇ 12 ಎಸ್ಐ ಹುದ್ದೆಗಳು ಖಾಲಿ ಇವೆ. ಹಲವು ಪೊಲೀಸ್ ಠಾಣೆಗಳಿಗೆ ಜೀಪ್ ಸೌಲಭ್ಯ ಇಲ್ಲ. ಸ್ವಂತ ಜಿಲ್ಲೆಯ ಸಮಸ್ಯೆಗಳನ್ನೇ ಬಗೆಹರಿಸದ ಸಚಿವರು ಪ್ರತಿದಿನ ಆರ್ಎಸ್ಎಸ್ ವಿಶ್ಲೇಷಣೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ತಾಕತ್ತಿದ್ದರೆ, ಆರ್.ಎಸ್.ಎಸ್‌ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಾಬೀತುಪಡಿಸಲಿ. ಅದನ್ನು ಬಿಟ್ಟು ಪ್ರತಿದಿನ ಲಘುವಾಗಿ ಮಾತನಾಡುವುದು ಕುರುಡರು ಆನೆಯನ್ನು ವರ್ಣಿಸಿದಂತೆ ಕಾಣುತ್ತದೆ. ಈ ಹಿಂದೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಸರ್ದಾರ್ ಪಟೇಲ್ ಅವರಂತಹ ನಾಯಕರಿಗೇ ಆರ್‌ಎಸ್ಎಸ್ ಮುಗಿಸಲು ಸಾಧ್ಯವಾಗಿಲ್ಲ. ನೀವು ಎಷ್ಟು ಕೆಸರೆರಚುತ್ತೀರೋ, ಸಂಘಟನೆ ಕೆಸರಿನಲ್ಲಿ ಅರಳುವ ಕಮಲದಂತೆ ಮತ್ತಷ್ಟು ಪ್ರಬಲವಾಗಿ ಹೊರಹೊಮ್ಮುತ್ತದೆ ಎಂದರು.ಕಳೆದ ಆರು ತಿಂಗಳಲ್ಲಿ ಯಾದಗಿರಿ, ಶಹಾಬಾದ್ ಹಾಗೂ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ತೂರಾಟದ ಘಟನೆ ನಡೆದಿದ್ದರೂ ಗೃಹ ಸಚಿವರು ಯಾವುದೇ ಕಠಿಣ ನಿಲುವು ತಳೆದಿಲ್ಲ. ಶಿವಲಿಂಗಕ್ಕೆ ಅವಮಾನ ಮಾಡಿದ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪಿಗಳ ಮೇಲಿನ ಪ್ರಕರಣ ಹಿಂಪಡೆಯಲು ಸಹಿ ಮಾಡುವ ಮೂಲಕ ಸಚಿವರು ಒಂದು ವರ್ಗದ ತುಷ್ಟೀಕರಣಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದರು.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಅಂಬೇಡ್ಕರ್‌ಅವರ ಯಾರ ಮೇಲೂ ದ್ವೇಷ ಸಾಧಿಸದೆ ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ನೀಡಿದರು. ಆದರೆ, ಗೃಹ ಸಚಿವರು ಸಂವಿಧಾನ ಮತ್ತು ಮೀಸಲಾತಿಯ ಲಾಭ ಪಡೆದು ಇಂದು ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.