ಮಂಗಳೂರು: ಮಂಗಳೂರು ನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಮುಂದಿನ ವರ್ಷದೊಳಗೆ ಮತ್ತೆ 100 ವಸತಿಗೃಹ ಮಂಜೂರು ಮಾಡಿಸುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.ನಗರದ ಅತ್ತಾವರ ಪೊಲೀಸ್ ಲೇನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ಸಿಬ್ಬಂದಿಗೆ 12 ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿ- ಸಿಬ್ಬಂದಿಗೆ 54 ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಎರಡು ಹೊಸ ಪೊಲೀಸ್ ಠಾಣೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹೊಸ ಠಾಣೆ ಮಂಜೂರಾತಿಗೆ ಕೇಂದ್ರ ಸರ್ಕಾರದ ಕೆಲವೊಂದು ನಿಯಮಗಳನ್ನು ಅನುಸರಿಸಿ ಮಂಜೂರಾತಿ ದೊರೆಯಬೇಕಿದೆ. ಹಳೆ ಕಟ್ಟಡಗಳ ಬದಲಿಗೆ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕರಾವಳಿ ಭದ್ರತಾ ಪಡೆಯ 15 ಬೋಟ್‌ಗಳಲ್ಲಿ ಮೂರ್ನಾಲ್ಕು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆಯೂ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಡ್ರಗ್ಸ್ ನಿಯಂತ್ರಣ:ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಬಿಗ್ರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿಯೂ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳು ನಡೆಯುತ್ತಿದ್ದು, ಡ್ರಗ್ಸ್ ಪೂರೈಕೆ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಡ್ರಗ್ಸ್ ನಿಯಂತ್ರಣದಲ್ಲಿ ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿರಿಸಿಕೊಂಡು ಈ ಪಿಡುಗಿನಿಂದ ಸಮಾಜವನ್ನು ಮುಕ್ತಗೊಳಿಸಲು ಸಾಧ್ಯವಾಗಲಿದೆ ಎಂದು ಗೃಹ ಸಚಿವರು ಸಲಹೆ ನೀಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಗರದ ಎರಡು ಪೊಲೀಸ್ ಠಾಣೆಗಳು ಬಾಡಿಗೆ ಕಟ್ಟಡದಲ್ಲಿವೆ. ಜೈಲನ್ನು ಶೀಘ್ರ ಸ್ಥಳಾಂತರಿಸುವ ಮೂಲಕ ಸಮಸ್ಯೆ ನಿವಾರಿಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕರಾವಳಿ ಕಾವಲು ಪಡೆಯನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಮುಗಿದ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕಳೆದ ವರ್ಷ ಉದ್ಘಾಟನೆಗೊಂಡಿದ್ದ ವಸತಿ ಗೃಹವೊಂದಕ್ಕೆ ದಿಢೀರ್ ಭೇಟಿ ನೀಡಿದರು. ಸಿಎಆರ್ ಹೆಡ್ ಕಾನ್‌ಸ್ಟೆಬಲ್ ಭೀಮಪ್ಪ ಅವರ ಮನೆ ಅದಾಗಿದ್ದು, ಭೀಮಪ್ಪ ಅವರ ಪತ್ನಿ ಶ್ರುತಿ ಅವರು ಗೃಹ ಸಚಿವರಿಗೆ ಬಿಸಿ ಹಾಲು ಹಾಗೂ ಮನೆಯಲ್ಲಿ ತಯಾರಿಸಿದ ಶೇಂಗಾ ಲಾಡು ನೀಡಿದರು. ಅದನ್ನು ಸೇವಿಸಿದ ಡಾ.ಪರಮೇಶ್ವರ್ ಅವರು ಯೋಗಕ್ಷೇಮ ವಿಚಾರಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಕಾರಾಗೃಹಕ್ಕೆ ತಡೆಗೋಡೆ ನಿರ್ಮಿಸಲು 50 ಕೋಟಿ ರು. ಅಗತ್ಯವಿದೆ. ಬ್ಯಾರಕ್‌ಗಳನ್ನು ಈಗಾಗಲೇ ನಿರ್ಮಿಸಿರುವುದರಿಂದ ಜೈಲನ್ನು ಸ್ಥಳಾಂತರಿಸಬಹುದು. ಉಳಿದ ಒಳಾಂಗಣ ಕೆಲಸಗಳನ್ನು ನಂತರ ಕೈಗೊಳ್ಳಬಹುದು ಎಂದರು.