ಕನಕಪುರ: ತಾಲೂಕಿನ ಹೆಮ್ಮೆಯ ಪುತ್ರ, ನಿಷ್ಠಾವಂತ ರಾಜಕಾರಣಿ ಹಾಗೂ ದೇಶದ ರಾಜಕೀಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದು ತಾಲೂಕಿನ ಜನರಲ್ಲಿ, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದ್ದು ಪದಗ್ರಹಣ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ತಯಾರಿ ನಡೆಸಿದ್ದಾರೆ.ತಾಲೂಕಾದ್ಯಂತ ಮಹಿಳೆಯರು, ಹಿರಿಯರು, ಕಿರಿಯರು ತಾಲೂಕಿನ ಮಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟ ಏರುತ್ತಿರುವುದಕ್ಕೆ ಸಂತಸ ಹಂಚಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತ ಪೂರ್ವವಾಗಿ ಜಯಗಳಿಸಲು ರಾಜ್ಯದಲ್ಲಿ ಹಗಲಿರುಳು ಶ್ರಮವಹಿಸಿ ನಾಡಿನ ಜನರ ಪ್ರೀತಿ, ವಿಶ್ವಾಸ ಗಳಿಸಿ ರಾಜ್ಯದಲ್ಲಿ ರಾಜಕೀಯ ಇತಿಹಾಸ ನಿರ್ಮಾಣ ಮಾಡಿದ ಕ್ಷೇತ್ರದ ಜನಪ್ರಿಯ ಶಾಸಕರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿರುವುದು ತಾಲೂಕಿನ ಜನರ ಬಹು ದಶಕಗಳ ಕನಸು ನನಸಾಗಿದೆ. ಉತ್ತಮ ಆಡಳಿತ ನೀಡುವ ಮೂಲಕ ತಾಲೂಕಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಪರ್ವ ತರಲಿ ಎಂದು ಶುಭ ಹಾರೈಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದು ಕೊಡುವಲ್ಲಿ ಯಶಸ್ಸು ಸಾಧಿಸಿದ ನಮ್ಮ ಊರಿನ ಮಗನಿಗೆ ಪಕ್ಷದ ವರಿಷ್ಠರು ಗೌರವದಿಂದ ಮುಖ್ಯಮಂತ್ರಿ ಪಟ್ಟ ಕಟ್ಟುತ್ತಿರುವುದು ಉತ್ತಮ ನಡೆಯಾಗಿದೆ. ಪಕ್ಷವನ್ನು ತನ್ನ ಹೆತ್ತ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಗೌರವಿಸುವ ಡಿಕೆಶಿ ಪಕ್ಷಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ ಫಲವಾಗಿ ಕಳೆದ ಬಾರಿ ಕನಕಪುರ ಕ್ಷೇತ್ರದ ಮತದಾರರು ಪಕ್ಷಭೇದ ಮರೆತು ನಮ್ಮ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಹೆಮ್ಮೆ, ಪ್ರೀತಿ ನಂಬಿಕೆಯಿಂದ ಅತಿ ಹೆಚ್ಚು ಮತಗಳನ್ನು (1,25,000) ನೀಡುವ ಮೂಲಕ ಇಡೀ ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದರು. ಅವರಿಗೆ ಮುಖ್ಯಮಂತ್ರಿ ಸ್ಥಾನ, ತಡವಾಗಿ ಸಿಕ್ಕಿದರೂ ಸಿಕ್ಕ ಅವಕಾಶದಲ್ಲಿ ಡಿಕೆಶಿ ಉತ್ತಮ ಆಡಳಿತ ನೀಡುವ ಮೂಲಕ ನಾಡಿನ ಬಡವರ, ರೈತರ, ಶ್ರಮಿಕರ ಪರವಾಗಿ ಕೆಲಸ ಮಾಡುವುದರ ಜೊತೆಗೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಮುಖಾಂತರ ನಮ್ಮ ತಾಲೂಕು, ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲಿ ಎಂದು ಹಾರೈಸಿದ್ದಾರೆ.
ಕೆ ಕೆ ಪಿ ಸುದ್ದಿ 02:ಕನಕಪುರ ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ.