ಕನ್ನಡಪ್ರಭ ವಾರ್ತೆ ಮಂಡ್ಯ
ನಾನು ಅಧಿಕಾರವಧಿಯುದ್ದಕ್ಕೂ ಯಾವುದೇ ಕಳಂಕ, ಕಪ್ಪುಚುಕ್ಕೆಯಿಲ್ಲದೆ ಅಧಿಕಾರ ನಿರ್ವಹಿಸಿಕೊಂಡು ಬಂದಿದ್ದೇನೆ. ಕೆಲವೊಂದು ದೀರ್ಘಕಾಲದ, ಜಟಿಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗದಿದ್ದರೂ ಶಿಕ್ಷಕರನ್ನು ಕಡೆಗಣಿಸದೇ ಅವರಿಗೆ ಗೌರವ ತರುವ ನಿಟ್ಟಿನಲ್ಲಿ ನಡೆದುಕೊಂಡಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಎದುರಿಸಿದ ನಾಲ್ಕು ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ನಾನು ನಾಲ್ಕು ಬಾರಿ ಆಯ್ಕೆಯಾದಾಗಲೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುತ್ತಿದ್ದವು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದಿದ್ದೇನೆ. ಈ ಬಾರಿ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿದರೆ ದೀರ್ಘಕಾಲದಿಂದ ಪರಿಹಾರ ಸಿಗದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಬಡ್ತಿ ಪಡೆದ ಶಿಕ್ಷಕರಿಗೆ ವೇತನ ಹೆಚ್ಚಳ, ಖಾಸಗಿ ಶಾಲಾ ಶಿಕ್ಷಕರರಿಗೆ ವೇತನ , ಪಿಂಚಣಿ ವ್ಯವಸ್ಥೆ ಇಲ್ಲದಿರುವುದು, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಿದೆ. ೬ನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿ ಮಾಡಿದವರು ಸಿದ್ದರಾಮಯ್ಯ. ಈಗ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಏಳನೇ ವೇತನ ಆಯೋಗವನ್ನೂ ಯಥಾವತ್ತಾಗಿ ಜಾರಿ ಮಾಡಿಸುವುದಕ್ಕೆ ಸಾಧ್ಯವಾಗಲಿದೆ. ಶಿಕ್ಷಕರಿಗೆ ೨ ಇಂಕ್ರಿಮೆಂಟ್ ಕೊಟ್ಟಿದ್ದ ಸಿದ್ದರಾಮಯ್ಯನವರು, ಹಾಸ್ಟೆಲ್ ಸೌಲಭ್ಯವಿಲ್ಲದವರಿಗೆ ೨೫೦೦ ರು. ಸಹಾಯಧನವನ್ನು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ್ದಾಗಿ ತಿಳಿಸಿದರು.
ಜೆಡಿಎಸ್-ಬಿಜೆಪಿ ಪ್ರತಿಸ್ಪರ್ಧಿ ಎಷ್ಟೇ ಆಮಿಷ, ಹಣ ಹಂಚಿಕೆ ಮಾಡಿದರೂ ಶಿಕ್ಷಕರು ಅದಕ್ಕೆ ಮಣಿಯುವವರಲ್ಲ. ಶಿಕ್ಷಕರು ಅವರದ್ದೇ ಆದ ಮೌಲ್ಯ, ಘನತೆ, ಗೌರವಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಹಣದಿಂದ ಶಿಕ್ಷಕರನ್ನು ಕೊಂಡುಕೊಳ್ಳಲಾಗುವುದಿಲ್ಲ. ಶಿಕ್ಷಕರು ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಸಿ.ಡಿ.ಗಂಗಾಧರ್, ಎಂ.ಎನ್.ಶ್ರೀಧರ್, ಅಂಜನಾ, ಶಿವರುದ್ರಪ್ಪ ಇದ್ದರು.