ಪ್ರಾಮಾಣಿಕ ಸರ್ಕಾರಿ ನೌಕರರು ದೇಶದ ಆಸ್ತಿ: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork | Published : Aug 5, 2024 12:36 AM

ಸಾರಾಂಶ

ಪ್ರಾಮಾಣಿಕ ಸರ್ಕಾರಿ ನೌಕರರು ದೇಶದ ಆಸ್ತಿ. ಸರ್ಕಾರಿ ನೌಕರರು ಎಷ್ಟು ನಿಷ್ಠೆಯಿಂದ ಕೆಲಸ ಮಾಡಬೇಕು ಎನ್ನುವುದಕ್ಕೆ ವೆಂಕರಮಣ ಆಚಾರ್ ಮಾದರಿಯಾಗಿದ್ದರು

ಕನ್ನಡಪ್ರಭವಾರ್ತೆ ಸಾಗರ

ತಮಗೆ ದೊರಕಿರುವ ಅವಕಾಶದಲ್ಲಿ ಉತ್ತಮ ಸೇವೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಸರ್ಕಾರಿ ನೌಕರರು ನಿವೃತ್ತಿ ನಂತರವೂ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಪಟ್ಟಣದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ವೆಂಕಟರಮಣ ಆಚಾರ್ ಶಿಷ್ಯ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಲೋಕಹಿತಕರ ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕ ಸರ್ಕಾರಿ ನೌಕರರು ದೇಶದ ಆಸ್ತಿ. ಸರ್ಕಾರಿ ನೌಕರರು ಎಷ್ಟು ನಿಷ್ಠೆಯಿಂದ ಕೆಲಸ ಮಾಡಬೇಕು ಎನ್ನುವುದಕ್ಕೆ ವೆಂಕರಮಣ ಆಚಾರ್ ಮಾದರಿಯಾಗಿದ್ದರು. ಅವರ ಸತ್ಯ, ಪ್ರಾಮಾಣಿಕತೆ, ಕರ್ತವ್ಯಬದ್ಧತೆ ನೌಕರರು ಅಳವಡಿಸಿಕೊಳ್ಳಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ. ಕ್ಷೇತ್ರವ್ಯಾಪ್ತಿಯಲ್ಲಿ ಪ್ರಾಮಾಣಿಕ ಸರ್ಕಾರಿ ನೌಕರರಿಗೆ ಎಲ್ಲ ರೀತಿ ಬೆಂಬಲ ನೀಡಲಾಗುತ್ತದೆ ಎಂದು ಹೇಳಿದರು.

ಬಳಗದ ಪ್ರಧಾನ ಸಂಚಾಲಕ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಸಮಾಜದಲ್ಲಿ ದುಷ್ಟರು, ಭ್ರಷ್ಟರು ಬೇಗ ಒಂದಾಗುತ್ತಾರೆ. ಆದರೆ ಸಜ್ಜನರು ಒಂದಾಗುವುದು ಕಷ್ಟಸಾಧ್ಯ. ವೆಂಕಟರಮಣ ಆಚಾರ್ ನಿಧನರಾಗಿ ಒಂದು ವರ್ಷವಾಯಿತು. ಅವರಿಂದ ಉಪಕೃತರಾದವರು ಸಾಕಷ್ಟು ಜನರಿದ್ದಾರೆ. ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ನೀಡಲಾಗುತ್ತಿದೆ. ಈ ವರ್ಷ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಬಳಗಕ್ಕೆ ಹೆಮ್ಮೆ ತಂದಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ನಾನು ವೆಂಕಟರಮಣ ಆಚಾರ್ ಅವರಿಂದ ಪ್ರಭಾವಿತನಾದವನು. ಸರ್ಕಾರಿ ನೌಕರರು ಹೇಗೆ ಇರಬೇಕು ಎನ್ನುವುದಕ್ಕೆ ವೆಂಕಟರಮಣ ಆಚಾರ್ ಸಾಕ್ಷಾತ್ ಉದಾಹರಣೆಯಾಗಿದ್ದರು. ಕೆ.ಸಿ.ಎಸ್.ಆರ್. ನಿಯಮ ಅರ್ಥ ಮಾಡಿಕೊಂಡು ಸಂಕಷ್ಟದಲ್ಲಿರುವ ನೌಕರರಿಗೆ ನೆರವು ನೀಡಿದ ಹೆಗ್ಗಳಿಕೆ ಅವರಿದ್ದಾಗಿತ್ತು. ಅವರ ಹೆಸರಿನಲ್ಲಿ ನೀಡಲಾದ ಪ್ರಶಸ್ತಿಯನ್ನು ಅತ್ಯಂತ ವಿನೀತನಾಗಿ ಸ್ವೀಕರಿಸಿದ್ದೇನೆ. ಸರ್ಕಾರಿ ನೌಕರರಲ್ಲಿ ಸಾಕಷ್ಟು ಜನ ಪ್ರಾಮಾಣಿಕರಿದ್ದಾರೆ. ಅವರ ಎಲ್ಲರ ಪ್ರತಿನಿಧಿಯಾಗಿ ನಾನು ಈ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್, ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಮಾತನಾಡಿದರು. ಶಾರದಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಜಿ.ನಾಗೇಶ್ ಬರೆದಿರುವ `ಲೋಕಹಿತಕರ ವೆಂಕಟಮಣ ಆಚಾರ್'''''''' ಪುಸ್ತಕವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಬಿಡುಗಡೆ ಮಾಡಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಶಿಕ್ಷಕರ ವಿವಿಧ ಸಂಘಟನೆ ಪ್ರೇಮಕುಮಾರಿ, ಮಹಾಬಲೇಶ್ವರ ಜಿ., ಲಕ್ಷ್ಮಣ್ ಆರ್. ನಾಯ್ಕ, ಹೂವಪ್ಪ, ವಿಕ್ಟೋರಿಯಾ ಫಟಾರ್ಡೋ, ಚಂದ್ರಪ್ಪ, ಪ್ರಭು ಇ.ಎನ್. ಇದ್ದರು. ವಿ.ಶಂಕರ್ ಸ್ವಾಗತಿಸಿ, ರವೀಂದ್ರ ಕೆ.ವಿ. ವಂದಿಸಿ, ವೈ.ಮೋಹನ್ ನಿರೂಪಿಸಿದರು.

Share this article