.ಸಂಘ-ಸಂಸ್ಥೆಗಳು ಬೆಳೆಯಲು ಪ್ರಾಮಾಣಿಕರ ಸೇವೆ ಅಗತ್ಯ: ಡಾ.ವೀರಣ್ಣ ಚರಂತಿಮಠ

KannadaprabhaNewsNetwork | Published : May 27, 2024 1:01 AM

ಸಾರಾಂಶ

ಬಿವಿವಿ ಸಂಘ ಶಿಕ್ಷಣ ರಂಗದಲ್ಲಿ ಹೆಸರು ಗಳಿಸಲು ಇಲ್ಲಿನ ಪ್ರಾಚಾರ್ಯರು, ಶಿಕ್ಷಕರ ಪ್ರಾಮಾಣಿಕ ಸೇವೆ, ಅವರು ನೀಡುವ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದ್ದು, ಇಂಥ ಪ್ರಾಮಾಣಿಕರು ಸಂಘಕ್ಕೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿವಿವಿ ಸಂಘ ಶಿಕ್ಷಣ ರಂಗದಲ್ಲಿ ಹೆಸರು ಗಳಿಸಲು ಇಲ್ಲಿನ ಪ್ರಾಚಾರ್ಯರು, ಶಿಕ್ಷಕರ ಪ್ರಾಮಾಣಿಕ ಸೇವೆ, ಅವರು ನೀಡುವ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದ್ದು, ಇಂಥ ಪ್ರಾಮಾಣಿಕರು ಸಂಘಕ್ಕೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಿವಿವಿ ಸಂಘ, ಜಿ.ಬಿ. ದಾನಶೆಟ್ಟಿ ಅಭಿನಂದನ ಗ್ರಂಥ ಸಮಿತಿ ವತಿಯಿಂದ ಹಮ್ಮಿಕೊಂಡ ನಿವೃತ್ತಿ ಹೊಂದುತ್ತಿರುವ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಿಗೆ ಜ್ಞಾನ ಶ್ರೇಷ್ಠಿ ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘದ ಕಾಲೇಜು, ಶಾಲೆಗಳಲ್ಲಿ ಉತ್ತಮ ಪ್ರಾಚಾರ್ಯ ಹಾಗೂ ಶಿಕ್ಷಣ ವೃಂದ, ಸಂಘದ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಜೊತೆಗೆ ಅವರು ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣದಿಂದಾಗಿ ಬಿವಿವಿ ಸಂಘ ದೇಶಕ್ಕೆ ಉತ್ತಮ ಸಾಧಕರನ್ನು ನೀಡುತ್ತಿದ್ದು, ದೇಶವ್ಯಾಪಿ ತನ್ನ ವಿಸ್ತಾರ ಹೆಚ್ಚಿಸುವುದರ ಜೊತೆಗೆ ಉತ್ತಮ ಕೀರ್ತಿಗೆ ಪಾತ್ರವಾಗಿದೆ, ಜಿ.ಬಿ. ದಾನಶೆಟ್ಟಿ ಅವರು ಮೃದು ಸ್ವಭಾವದವರು, ಅವರ ಪ್ರಾಮಾಣಿಕ ಕಾರ್ಯಕ್ಷಮತೆಯಿಂದಾಗಿ ರಾಷ್ಟ್ರಪತಿ ಪದಕ ಸೇರಿದಂತೆ ರಾಷ್ಟ್ರಮಟ್ಟದ ಪ್ರಶಸ್ತಿಗಳ ಜೊತೆಗೆ ರಾಷ್ಟ್ರೀಯ ಗೌರವವನ್ನು ಕಾಲೇಜಿಗೆ ತರುವ ಮೂಲಕ ಸಂಘದ ಕೀರ್ತಿ ಹೆಚ್ಚಿಸಿದ್ದಾರೆ, ಸಂಘ ಸಂಸ್ಥೆಗಳಿಗೆ ಇಂಥ ಪ್ರಾಮಾಣಿಕರ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ, ಸಮಾಜದಲ್ಲಿ ಸಾಧಕರ ಸಾಧನೆಗಳು ಜನಮಾಸಗಳಲ್ಲಿ ಉಳಿದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು, ಜಿ.ಬಿ. ದಾನಶೆಟ್ಟಿ ಅವರು ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ ಒಂದೇ ಸಂಸ್ಥೆಯಲ್ಲಿ 35 ವರ್ಷಗಳ ಸೇವೆ ಅವರ ಆದರ್ಶಕ್ಕೆ ಹಿಡಿದ ಕನ್ನಡಿಯಾಗಿದೆ. ಮೇ 30ರಂದು ಅವರು ನಿವೃತ್ತಿಯಾಗುತ್ತಿದ್ದು, ಅವರ ಸೇವೆಗೆ ಬೆನ್ನುಲುಬಾಗಿ ನಿಂತ ಸಂಘದ ಆಡಳಿತ ಮಂಡಳಿ ಹಾಗೂ ಸಂಘದ ಕಾರ್ಯಾಧ್ಯಕ್ಷರ ಧನಾತ್ಮಕ ನಿಲುವುಗಳು ಶ್ಲಾಘನೀಯ. ಬಾಗಲಕೋಟೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಬಿ.ವಿ.ವಿ.ಸಂಘ ಕಾರಣವಾಗಿದೆ ಎಂದರು.

ಅಭಿನಂದನಪರ ಮಾತುಗಳನ್ನಾಡಿದ ಪ್ರಾಚಾರ್ಯ ಜಿ.ಬಿ. ದಾನಶೆಟ್ಟಿ, ಬಿವಿವಿ ಸಂಘ ತಾಯಿ ಕರುಳಿನ ಸಂಸ್ಥೆ, ಇಲ್ಲಿನ ಹಿರಿಯರ ಮಾರ್ಗದರ್ಶನ ಅವರ ಅನುಭವಗಳ ಮೂಲಕ ಹಾಗೂ ಸಂಘದ ಕಾರ್ಯಾಧಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಪ್ರಾಮಾಣಿಕತೆ, ಸಮಯ ಪ್ರಜ್ಞೆಯಿಂದ ಪ್ರೇರೇಪಿತನಾಗಿ ಅವರ ಮಾರ್ಗದರ್ಶನದಲ್ಲಿ ಸುಧೀರ್ಘ ಸೇವೆ ಸಲ್ಲಿಸಲು ಅವಕಾಶ ಒದಗಿದ್ದು ನನ್ನ ಹೆಮ್ಮೆ, ಮಾನವೀಯ ಮೌಲ್ಯಗಳ ಜೊತೆಗೆ ಆಧುನಿಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಘದಲ್ಲಿ ನಾನು ಒಬ್ಬನಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.

ಸಾನ್ನಿಧ್ಯ ವಹಿಸಿ ಜ್ಞಾನಶ್ರೇಷ್ಠಿ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಚರಂತಿಮಠದ ಪ್ರಭುಸ್ವಾಮೀಜಿ, ಈ ಅಭಿನಂದನ ಗ್ರಂಥಗಳು ಯುವ ಪೀಳಿಗೆಗೆ ಮಾರ್ಗದರ್ಶಿಗಳಾಗಲಿ, ಜೀವನ ಬದಲಾಗಬೇಕಾದರೆ ಪುಸ್ತಕ ಓದುವುದು ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೆ ಪ್ರಾಚಾರ್ಯ ಜಿ.ಬಿ. ದಾನಶೆಟ್ಟಿಯವರ ಲೇಖನಗಳನ್ನು ಪ್ರಧಾನಿ ಕಾರ್ಯಾಲಯ ಮೆಚ್ಚುಗೆ ವ್ಯಕ್ತಪಡಿಸಿರುವುದು ಇವರ ಸಾಧನೆ. ಪಾಲಿಟೇಕ್ನಿಕ್ ಕಾಲೇಜಿಗೆ ಉನ್ನತ ಶ್ರೇಣಿ ಒದಗಿಸುವ ಮೂಲಕ ತಮ್ಮ ಸೇವಾ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆ ಆದ ಕೊಡುಗೆ ನೀಡಿರುವುದು ಹೆಮ್ಮೆ ಯ ವಿಷಯವಾಗಿದೆ.

ಜಿ.ಬಿ. ದಾನಶೆಟಿ ಹಾಗೂ ಗೀತಾ ದಾನಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಮೆಲೆ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಆಡಳಿತಾಧಿಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ, ಜ್ಞಾನಶ್ರೇಷ್ಠಿ ಗ್ರಂಥ ಸಂಪಾದಕಿ ಡಾ.ಗೀತಾ ದಾನಶೇಟ್ಟಿ ಇದ್ದರು. ಅಭಿನಂಧನ ಗ್ರಂಥದ ಗೌರವ ಸಂಪಾದಕ ಎಸ್.ಆರ್. ಮನಹಳ್ಳಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಪೂಜಾರ ಗ್ರಂಥ ಅವಲೋಕನ ಮಾಡಿದರು, ಸಂಪಾದಕರಾದ ಎಸ್.ಎಸ್.ದೊಡ್ಡಮನಿ ವಂದಿಸಿದರು,

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಪಾಲಿಟೆಕ್ನಿಕ್‌ ಕಾಲೇಜಿನ ಶಿಕ್ಷಕರು, ಸಿಬ್ಬಂದಿ, ದಾನಶೆಟ್ಟಿ ಪರಿವಾರದವರು ಇದ್ದರು.

ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣಕ್ಕೆ ಬೇಕಾಗುವ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಬಿವಿವಿ ಸಂಘ ಮುಂಚೂಣಿಯಲ್ಲಿದೆ, ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟು, ಅನೇಕ ಸಾಧಕರನ್ನು ದೇಶಕ್ಕೆ ಕೊಟ್ಟ ಸಂಸ್ಥೆ ಎಂಬುದು ಹೆಮ್ಮೆಯ ವಿಷಯ.

-ಪ್ರಭು ಸ್ವಾಮೀಜಿ ಚರಂತಿಮಠ ಬಾಗಲಕೋಟೆ

Share this article