ಪತ್ರಿಕಾರಂಗದಲ್ಲಿ ಪ್ರಾಮಾಣಿಕತೆ, ನಿಖರತೆ ಮತ್ತಷ್ಟು ಹೆಚ್ಚಬೇಕಿದೆ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Jan 22, 2026, 01:45 AM IST
ಫೋಟೊ:೨೧ಕೆಪಿಸೊರಬ-೦೧ : ಸೊರಬ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಹಿರಿಯ ಪತ್ರಕರ್ತರು ಮತ್ತು ನಿಕಟಪೂರ್ವ ಅಧ್ಯಕ್ಷರುಗಳನ್ನು  ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸಮಾಜಕ್ಕೆ ಸರಿ ದಾರಿ ತೋರುವ ಪತ್ರಿಕಾರಂಗ ತನ್ನ ನಿಜತನವನ್ನು ಕಳೆದುಕೊಂಡರೆ ಇಡೀ ಸಮಾಜವೇ ಭ್ರಷ್ಟವಾಗುತ್ತದೆ. ಆದ್ದರಿಂದ ನೈಜತೆ, ನಿಖರತೆ ಮತ್ತು ಪ್ರಾಮಾಣಿಕತೆ ಪತ್ರಿಕಾರಂಗದಲ್ಲಿ ಇನ್ನಷ್ಟು ಹೆಚ್ಚಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

ಸಮಾಜಕ್ಕೆ ಸರಿ ದಾರಿ ತೋರುವ ಪತ್ರಿಕಾರಂಗ ತನ್ನ ನಿಜತನವನ್ನು ಕಳೆದುಕೊಂಡರೆ ಇಡೀ ಸಮಾಜವೇ ಭ್ರಷ್ಟವಾಗುತ್ತದೆ. ಆದ್ದರಿಂದ ನೈಜತೆ, ನಿಖರತೆ ಮತ್ತು ಪ್ರಾಮಾಣಿಕತೆ ಪತ್ರಿಕಾರಂಗದಲ್ಲಿ ಇನ್ನಷ್ಟು ಹೆಚ್ಚಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀರಂಗ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮರ್ಥವಾಗಿರುವ ಪತ್ರಿಕಾರಂಗ ತನ್ನದೇ ಆದ ಶಕ್ತಿ ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಪತ್ರಿಕಾರಂಗದ ನಿಜವಾದ ದಿಕ್ಕು, ದಿಸೆ ಬದಲಾಗಿದ್ದು, ಈ ಕಾರಣದಿಂದ ಪತ್ರಿಕಾರಂಗ ತಮ್ಮತನವನ್ನು ಕಳೆದುಕೊಂಡಿದೆ. ಹಾಗಾಗಿ ಸಾರ್ವಜನಿಕ ವಲಯ ತನ್ನ ನಿಷ್ಟುರ ಬದುಕಿನಲ್ಲಿ ಯಾರಿಗೆ ಪ್ರಶ್ನೆ ಮಾಡಬೇಕು ಎನ್ನುವ ಜಿಜ್ಞಾಸೆಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಚಿವನಾಗಿ ಉತ್ತಮ ಕೆಲಸ ಮಾಡಿದ್ದರೂ, ತಿರುಚಿ ಹಾಕಿದಾಗ ಬಹಳ ಬೇಸರವಾಗುತ್ತದೆ. ಸಾರ್ವಜನಿಕರು ರಾಜಕಾರಣಿಗಳನ್ನು ದೂರಿದಂತೆ ಪತ್ರಕರ್ತರನ್ನು ದೂರುವ ಸಂದರ್ಭ ಹೆಚ್ಚಾಗಿದೆ. ವೃತ್ತಿಯಲ್ಲಿ ಬದ್ಧತೆ, ನೈತಿಕತೆ ಕಾಪಾಡಿಕೊಳ್ಳುವ ಮೂಲಕ ನಿಮ್ಮನ್ನು ನೀವು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು.

ಜಡೆ ಮಠದ ಡಾ.ಮಹಾಂತ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪತ್ರಿಕೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕಿನ ಮಾಧ್ಯಮ ಸ್ನೇಹಿತರು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಅವರು, ದಿನದ ಬಹುತೇಕ ಸಮಯವನ್ನು ಸಮಾಜದ ಅಭಿವೃದ್ಧಿಗೆ ಕಳೆಯುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ಸವಲತ್ತುಗಳು ಸಿಗಬೇಕಿದೆ. ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ನಾನೂ ಕೂಡ ಮಠದ ವತಿಯಿಂದ ಸಹಾಯ ಮಾಡುತ್ತೇನೆ ಎಂದರು.

ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ವ್ಯೆಯಕ್ತಿಕ ಬದುಕನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ರಾಜ್ಯದಲ್ಲಿ ಕೋವಿಡ್ ಕಾಲದಲ್ಲಿ ೫೪ ಜನ ಮೃತಪಟ್ಟರು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೊಸ ಪೀಳಿಗೆಯ ಪತ್ರಕರ್ತರಾಗಲು ಬಯಸುವವರು ಆಸ್ತಿ, ಮನೆ ಭದ್ರವಿದ್ದರೆ ಮಾತ್ರ ಸೇವೆ ಸಲ್ಲಿಸುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಯ ಪತ್ರಕರ್ತರಾದ ಕನ್ನಡಪ್ರಭ ವರದಿಗಾರ ಹೆಚ್.ಕೆ.ಬಿ. ಸ್ವಾಮಿ ಮತ್ತು ಯು.ಎನ್. ಲಕ್ಷ್ಮೀಕಾಂತಪ್ಪ, ಪತ್ರಕರ್ತರಾದ ಯು.ಎಂ. ನಟರಾಜ, ನಾಗರಾಜ್ ಜೈನ್, ಡಾ. ಎಸ್.ಎಂ. ನಿಲೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯನಿರತ ಪತ್ರಕರ್ತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಕಾರ್ಯದರ್ಶಿ ದೀಪಕ್ ಸಾಗರ್, ತಾಲೂಕು ಘಟಕದ ಅಧ್ಯಕ್ಷ ಜಿ.ಎಂ. ತೋಟಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಾಪಟ್, ಮಾಜಿ ಅಧ್ಯಕ್ಷ ನಾಗರಾಜ್ ಜೈನ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ತಾ.ಪಂ. ಮಾಜಿ ಅಧ್ಯಕ್ಷ ಎಚ್. ಗಣಪತಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ, ಪುರಸಭೆ ಮುಖ್ಯಾಧಿಕಾರಿ ಚಂದನ್ ಸೇರಿದಂತೆ ಮೊದಲಾದವರಿದ್ದರು. ಕಾವ್ಯಾ ಭಾವೆ ಪ್ರಾರ್ಥಿಸಿದರು. ಪತ್ರಕರ್ತರಾದ ಡಾ. ಎಸ್.ಎಂ.ನಿಲೇಶ್ ಸ್ವಾಗತಿಸಿ, ಶಿವಪ್ಪ ಹಿತ್ಲರ್ ವಂದಿಸಿ, ರವಿ ಕಲ್ಲಂಬಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ
ಬೆಂಗಳೂರು ನಗರದಲ್ಲಿ ಶೀಘ್ರವೇ ಪೇ ಆ್ಯಂಡ್‌ ಪಾರ್ಕ್‌ ಜಾರಿ