ಕನ್ನಡಪ್ರಭ ವಾರ್ತೆ ಮೇಲುಕೋಟೆ
ಯತಿರಾಜದಾಸರ್ ಚಾರಿಟೆಬಲ್ ಟ್ರಸ್ಟ್ ಅಧೀನ ಸಂಸ್ಥೆ, ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿರುವ ಜಾನಪದ ಜಾತ್ರೆಯಲ್ಲಿ 60ಕ್ಕೂ ಹೆಚ್ಚು ತಂಡಗಳ 800ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಅಭೂತಪೂರ್ವ ಕಲಾರಾಧನೆ ಸೇವೆ ಮಾಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ ಕಲಾಮೇಳ ಉದ್ಘಾಟಿಸಲಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾ ಮೇಳದಲ್ಲಿ ಕರ್ನಾಟಕದ ಎಲ್ಲಾ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಕೇರಳದ ತಂಡಗಳು ಭಾಗವಹಿಸಲಿದೆ.ಸವರ್ಣಲೇಪಿತ ಸೂರ್ಯಮಂಡಲ ವಾಹನೋತ್ಸವ ಸಂಭ್ರಮದ ಕ್ಷಣದ ಜೊತೆಗೆ ನೂರಾರು ಕಲಾವಿದರ ಜಾನಪದ ಕಲಾವೈಭವ ಕಣ್ತುಂಬಿಕೊಳ್ಳಲು ಭಕ್ತರು ಭಾಗವಹಿಸಬೇಕೆಂದು ಯತಿರಾಜದಾಸರ್ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕೋರಿದ್ದಾರೆ.
ಜಾತ್ರೆ ವೇಳೆ ತಮಟೆ, ನಗಾರಿ, ಚಂಡೆಗಳ ನೀನಾದ, ಗಾರುಡಿಗೊಂಬೆಗಳ ನರ್ತನ, ಕೇರಳದ ಚೆಂಡೆ ಮೇಳ, ಮಾರೇಹಳ್ಳಿಯ ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಾಮರಾಜನಗರದ ಹುಲಿವೇಷ, ಕೀಲುಕುದುರೆ, ಕರಗದ ನೃತ್ಯ, ಮೈಸೂರು ನಗಾರಿ, ಹುಬ್ಬಳ್ಳಿಯ ಜಗ್ಗಲಿಕೆ ಮೇಳ, ಸಾಂಬಾಳ್‌ನೃತ್ಯ, ಲಕ್ಷ್ಮೀಸಾಗರದ ನಾಸಿಕ್‌ಡೋಲ್, ಹಾಸನದ ಕರಡಿಮಜಲು, ಮಂಡ್ಯಜಿಲ್ಲೆಯ ನಂದಿಕಂಬ, ಪಟಾಕುಣಿತ. ಗಾರುಡಿಗೊಂಬೆ, ಹುಲಿವೇಷ,ವೀರಗಾಸೆ. ಕೋಲಾಟ, ಡೊಳ್ಳುಕುಣಿತ, ಜಾಂಜ್‌ಮೇಳ, ಸೋಮನಕುಣಿತ. ಚಕ್ರಾದಿಬಳೆ, ಖಡ್ಗಪವಾಡ, ವೀರಭದ್ರನಕುಣಿತ, ಗಾರುಡಿಗೊಂಬೆಗಳು, ಶಾಲಾ ಮಕ್ಕಳ 101 ಕಳಶ, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ, ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಮಹಿಳಾ ಡೊಳ್ಳು, ಯಕ್ಷಗಾನ ಗೊಂಬೆಗಳು, ಕೋಳಿ ನೃತ್ಯ, ಕರಡಿಕುಣಿತ ಸೇರಿದಂತೆ ಪ್ರಮುಖ ಜಾನಪದ ಕಲಾ ಪ್ರಕಾರ ತಂಡಗಳು ಭಾಗವಹಿಸಲಿವೆ. ಇದರ ಜೊತೆಗೆ 200ಕ್ಕೂ ಹೆಚ್ಚು ಮಹಿಳಾ ಕಲಾವಿದರು ಸೇರಿ 800 ಕಲಾವಿದರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.ಪಾಂಡವಪುರ ಜಿಜೆಸಿ ಮಕ್ಕಳ ಬ್ಯಾಂಡ್ ಜಕ್ಕನಹಳ್ಳಿ, ಸರ್ಕಾರಿಪ್ರೌಢಶಾಲೆ ಬಳಿಘಟ್ಟ, ಅಮೃತಿ, ಮೇಲುಕೋಟೆ ವಿವಿಧಶಾಲೆಯ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ. ಜ.24 ರಂದು ಜಾನಪದ ಸಂಜೆಯಲ್ಲಿ ಕಲಾವಿದರಿಗೆ ಸನ್ಮಾನ, ವನಿತೆಯರಿಗೆ ರಂಗವಲ್ಲಿ ಸೇವೆ ಜರುಗಲಿದೆ. ಎಂದು ಕಲಾಮೇಳದ ಸಂಘಟಕರಾದ ಪತ್ರಕರ್ತೆ ಸೌಮ್ಯ ಸಂತಾನಂ, ಕಲಾವಿದ ಕದಲಗೆರೆ ಶಿವಣ್ಣಗೌಡ ತಿಳಿಸಿದ್ದಾರೆ.