ಕನ್ನಡಪ್ರಭ ವಾರ್ತೆ ಆಲೂರು
ಅವರು ತಾಲೂಕು ಘಟಕವು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಹಾಗೂ ಆಯ- ವ್ಯಯ ಮಂಡನೆ ಮಾಡಿದ ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆದು ಸಮ್ಮೇಳನಗಳನ್ನು ಮಾಡುವ ಕನ್ನಡಪರ ಸಂಸ್ಥೆಗಳು, ಸಾರ್ವಜನಿಕರ ಹಣವನ್ನು ಕೋಟಿಗಟ್ಟಲೆ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿರುವುದು ದುರಂತ. ಕನ್ನಡ ನಾಡು- ನುಡಿ ಹೆಸರಿನಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವ, ಅಧಿಕಾರಶಾಹಿ ವ್ಯಕ್ತಿಗಳನ್ನು ಸಮಾಜ ಖಂಡಿಸಬೇಕಿದೆ. ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲೆಯಲ್ಲಿ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಕನ್ನಡಪರ ಮನಸ್ಸುಗಳನ್ನು ಒಂದುಗೂಡಿಸಿ ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಪ್ರಾರಂಭದಿಂದಲೂ ಆಲೂರು ತಾಲೂಕಿನಲ್ಲಿ ನೂರಾರು ಮನಸ್ಸುಗಳು ಕೈಜೋಡಿಸಿ, ತಾಲೂಕು ಘಟಕವನ್ನು ಕ್ರಿಯಾಶೀಲವಾಗಿಟ್ಟಿದೆ. ಹರಿಹಳ್ಳಿಯಲ್ಲಿ ನಡೆದ ಆಲೂರು ತಾಲೂಕು ಮೂರನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಸತ್ಯನಾರಾಯಣ ಹರಿಹಳ್ಳಿ, ಎಚ್.ಡಿ.ಸೋಮೇಶ್ ಮುಂತಾದ ಸ್ನೇಹಿತರ ಕೊಡುಗೆ ಅಪಾರವಿದೆ ಎಂದು ಹೇಳಿದರು.
ಸಾಹಿತ್ಯ ವೇದಿಕೆಯ ಪೋಷಕರಾದ ಡಾ. ಎಂ. ಇ. ಜಯರಾಜ್ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ಹೊರರಾಜ್ಯದಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ವೇದಿಕೆಯ ಎಲ್ಲಾ ಕಾರ್ಯಗಳಿಗೂ ನಾವೆಲ್ಲಾ ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದರು.ವೇದಿಕೆಯ ತಾಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಮಾತನಾಡಿ, ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಾಧಕರನ್ನು ಗುರುತಿಸುತ್ತಾ, ಪ್ರೋತ್ಸಾಹಿಸುತ್ತಾ, ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸುತ್ತಾ ಬಂದಿದೆ. ಇದರ ಒಟ್ಟೊಟ್ಟಿಗೆ ನಾವು ನಮ್ಮ ಕೈಲಾದಮಟ್ಟಿಗೆ ಸಹಕಾರವನ್ನು ನೀಡುತ್ತಾ ವೇದಿಕೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ. ಮುಂದೆಯೂ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ ಎಂದರು.
ವೇದಿಕೆಯ ವತಿಯಿಂದ ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಟ್ರಸ್ಟಿ ವಾಸು ಸಮುದ್ರವಳ್ಳಿ, ಪತ್ರಿಕಾ ಕಾರ್ಯದರ್ಶಿ ಎಚ್.ಡಿ.ಪ್ರದೀಪ್, ದಲಿತ ಮುಖಂಡ ಅರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.